ಜಿಲ್ಲೆ

ಕಾರಿನ ಮಿರರ್ ಗೆ ಬೈಕ್ ಡಿಕ್ಕಿ; ಸವಾರನನ್ನು ಬೆನ್ನಟ್ಟಿ ಕೊಂದ ದಂಪತಿ ಅಂದರ್! Bengaluru

ಬೆಂಗಳೂರು: ಕಾರಿನ ಕನ್ನಡಿಗೆ ಬೈಕ್​ ತಾಗಿದೆ ಎಂಬ ಕಾರಣಕ್ಕೆ ಕೋಪಗೊಂಡ​ ದಂಪತಿಗಳು, ಬೈಕ್​ನ್ನು ಎರಡು ಕಿಲೋ ಮೀಟರ್ ವರೆಗೆ ಹಿಂಬಾಲಿಸಿˌ ತಮ್ಮ ಕಾರಿನಿಂದ ಗುದ್ದಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಆರೋಪಿಗಳನ್ನು (Bengaluru )ಬೆಂಗಳೂರು ದಕ್ಷಿಣ ಪೊಲೀಸರು ಬುಧವಾರ (ಅ.29) ಬಂಧಿಸಿದ್ದಾರೆ.

ಘಟನೆ ಏನು?

ಈ ತಿಂಗಳ (ಅ. 25) ರಂದು ಶ್ರೀ ರಾಮ ದೇವಸ್ಥಾನ ಪ್ರದೇಶದಲ್ಲಿ ಕಾರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ವಿತರಣಾ ಏಜೆಂಟ್​ ದರ್ಶನ್​ ಮೃತಪಟ್ಟಿದ್ದು, ಆತನ ಸ್ನೇಹಿತ ವರುಣ್​ಗೆ ಗಂಭೀರ ಗಾಯಗೊಂಡಿದ್ದ ಎಂದು ಪ್ರಕರಣ ದಾಖಲಾಗಿತ್ತು.

ಆರಂಭದಲ್ಲಿ ಈ ಪ್ರಕರಣವನ್ನು ಜೆ.ಪಿ.ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಎಂದು ದಾಖಲಿಸಿದ್ದರು. ಆದರೆ, ಈ ಕುರಿತು ತನಿಖೆ ನಡೆಸಿ ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಕಾರು ಉದ್ದೇಶಪೂರ್ವಕವಾಗಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಇದು ಅಪಘಾತಕ್ಕಿಂತ ಪೂರ್ವಯೋಜಿತ ಕೃತ್ಯ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಬಗ್ಗೆ ಮಾತನಾಡಿದ ಡಿಸಿಪಿ (ದಕ್ಷಿಣ) ಲೋಕೇಶ್ ಜಗಲಾಸೂರ್​, ಮೊದಲು ಡೆಲಿವರಿ ಏಜೆಂಟ್​ ದರ್ಶನ್​ ಅವರ ಬೈಕ್​ ಕಾರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಕಾರಿನ ಗಾಜು ಒಡೆದು ಹೋಗಿದ್ದು, ಇಬ್ಬರ ನಡುವೆ ವಾಗ್ವಾದ ಪ್ರಾರಂಭವಾಗಿದೆ. ಇದಾದ ಬಳಿಕ ಕೋಪಗೊಂಡ ಕಾರು ಚಾಲಕ ದರ್ಶನ್​ನನ್ನು ಬೆನ್ನತ್ತಿ ಉದ್ದೇಶಪೂರ್ವಕವಾಗಿ ಹಿಂದಿನಿಂದ ಡಿಕ್ಕಿ ಹೊಡೆದಿದ್ದು, ಏಜೆಂಟ್​ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ.

ಆರೋಪಿಗಳನ್ನು ದೈಹಿಕ ಶಿಕ್ಷಣ ಶಿಕ್ಷಕ ಮನೋಜ್ ಶರ್ಮಾ ಮತ್ತು ಅವರ ಪತ್ನಿ ಆರತಿ ಎಂದು ಗುರುತಿಸಲಾಗಿದೆ. ಘಟನೆ ನಂತರ ಇವರಿಬ್ಬರು ಮುಖವಾಡ ಧರಿಸಿ ಅಪಘಾತ ಸ್ಥಳಕ್ಕೆ ಭೇಟಿ ನೀಡಿ, ಸಾಕ್ಷ್ಯವನ್ನು ನಾಶಮಾಡುವ ಪ್ರಯತ್ನದಲ್ಲಿ ಮುರಿದ ಕಾರಿನ ಭಾಗಗಳನ್ನು ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಚಾರಣೆ ನಡೆಸಿ ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 ರ ಅಡಿಯಲ್ಲಿ ಕೊಲೆ ಕೇಸು ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)