ಬೆಂಗಳೂರು: ಮಹಾನಗರದಲ್ಲಿ ಭಾರಿ ಮಳೆಯಿಂದ ತಗ್ಗುಪ್ರದೇಶಗಳು ಜಲಾವೃತಗೊಂಡು ಅಲ್ಲಿನ ಪ್ರದೇಶಗಳು ನೀರಿನಿಂದ ಬಾಧಿತವಾಗುವ ಪ್ರಕರಣಗಳು ಮುಂದುವರಿದಿದೆ. ಇದಕ್ಕೆ ಕೊನೆಯಾಡಲು ನಗರದೊಳಗೆ ಹಾದುಹೋಗಿರುವ ಮಳೆನೀರುಗಾಲುವೆಗಳನ್ನು (ಎಸ್‌ಡಬ್ಲ್ಯುಡಿ) ಪುನರುಜ್ಜೀವನಗೊಳಿಸುವ ಯೋಜನೆಯನ್ನು ಬಿಬಿಎಂಪಿ ಕೈಗೆತ್ತಿಕೊಳ್ಳಲಾಗಿದೆ.
ಪ್ರಸ್ತುತ ನಗರದಲ್ಲಿ 860 ಕಿ.ಮೀ. ಉದ್ದ ಮಳೆನೀರುಗಾಲುವೆಯ ಹರಿವು ಇದೆ. ಈ ಪೈಕಿ 491 ಕಿ.ಮೀ. ಲೈನಿಂಗ್ ಕೆಲಸ ಪೂರ್ಣಗೊಂಡಿದ್ದು, 125 ಕಿ.ಮೀ. ಉದ್ದದಷ್ಟು ಕಾಮಗಾರಿ ಪ್ರಗತಿಯಲ್ಲಿದೆ. ಬಾಕಿ ಉಳಿದಿರುವ 173.9 ಕಿ.ಮೀ. ಎಸ್‌ಡಬ್ಲ್ಯುಡಿ ಅನ್ನು ಪುನರುಜ್ಜೀವನಗೊಳಿಸಲು ವಿಶ್ವಬ್ಯಾಂಕ್ ನೆರವಿನಡಿ ಯೋಜನೆ ಜಾರಿ ರಾಜ್ಯ ಸರ್ಕಾರ ಹಸಿರು ನಿಶಾನೆ ನೀಡಿದೆ. ಇದರ ಬೆನ್ನಲ್ಲೇ ಬಿಬಿಎಂಪಿ ಟೆಂಡರ್ ಆಹ್ವಾನಿಸಿ ಮಳೆನೀರುಗಾಲುವೆಗಳನ್ನು ಪುನರ್ ನಿರ್ಮಿಸಿ ಪ್ರವಾಹ ತಡೆಗಟ್ಟಲು ದೃಷ್ಟಿಹರಿಸಿದೆ.
16 ಪ್ಯಾಕೇಜ್‌ಗಳಲ್ಲಿ ಕಾಮಗಾರಿ:
ಮಳೆನೀರುಗಾಲುವೆಯ ಪುನರುಜ್ಜೀವನ ಕಾರ್ಯವನ್ನು ಕರ್ನಾಟಕ ಜಲ ಭದ್ರತೆ ಮತ್ತು ಸ್ಥಿತಿ ಸ್ಥಾಪಕತ್ವ ಕಾರ್ಯಕ್ರಮ (ಕೆಡಬ್ಲ್ಯುಎಸ್‌ಆರ್‌ಪಿ) ಅಡಿಯಲ್ಲಿ ಬಾಹ್ಯ ಅನುದಾನಿತ (ವಿಶ್ವ ಬ್ಯಾಂಕ್) ಯೋಜನೆಯೊಂದಿಗೆ ಜಾರಿ ಮಾಡಲಾಗುತ್ತಿದೆ. ಇದಕ್ಕಾಗಿ 16 ಪ್ಯಾಕೇಜ್‌ಗಳನ್ನಾಗಿ ವಿಂಗಡಿಸಲಾಗಿದೆ. ಹೆಚ್ಚಿನ ಕಾಮಗಾರಿಗಳು ಕೋರಮಂಗಲ-ಚಲ್ಲಘಟ್ಟ ಕಣಿವೆ ವ್ಯಾಪ್ತಿಯಲ್ಲಿ ನಡೆಯಲಿವೆ. ಅದರಲ್ಲೂ ಪಾಲಿಕೆಯ ಹೊಸ ವಲಯಗಳಲ್ಲಿರುವ ಎಸ್‌ಡಬ್ಲ್ಯುಡಿಗಳಿಗೆ ನವ ರೂಪ ನೀಡಲಾಗುತ್ತದೆ. ಇದಕ್ಕಾಗಿ ಮಳೆನೀರುಗಾಲುವೆಯ ಆರ್‌ಸಿಸಿ ರಿಟೈನಿಂಗ್ ವಾಲ್‌ಗಳು ಸೇರಿ, ನೀರಿನ ಧಾರಣ ರಚನೆ, ಪ್ರಕೃತಿ ಆಧಾರಿತ ಪರಿಹಾರ ರಚನೆ, ಕಲ್ವರ್ಟ್ ಮತ್ತು ಸೇತುವೆಗಳ ಪ್ರವಾಹ ರಕ್ಷಣಾ ರಚನೆಗಳ ನಿರ್ಮಾಣ ಕಾಮಗಾರಿಗಳನ್ನು ಅಡಕಗೊಳಿಸಲಾಗಿದೆ. ಇವುಗಳ ಮೇಲ್ವಿಚಾರಣೆ, ಗುಣಮಟ್ಟ ನಿಯಂತ್ರಣ ಸಹಿತ ಪಿಎಂಸಿ ಸೇವೆ ಒದಗಿಸಲು ಗುತ್ತಿಗೆದಾರರಿಗೆ ಕೆಲಸ ವಹಿಸಲು ಟೆಂಡರ್ ಅಂತಿಮಗೊಳಿಸಲಾಗುತ್ತಿದೆ.
3 ವರ್ಷದ ಗಡುವು:
ಪ್ರತಿಯೊಂದು ಟೆಂಡರ್ ಆಯಾ ಪ್ರದೇಶ ಹಾಗೂ ರಾಜಕಾಲುವೆ ಉದ್ದ/ಅಗಲವನ್ನು ಆಧರಿಸಿ ಕಾಮಗಾರಿ ಕೈಗೊಳ್ಳಲು ಕಾಲಮಿತಿ ನಿಗದಿ ಮಾಡಲಾಗಿದೆ. 12 ತಿಂಗಳು, 24 ತಿಂಗಳು ಹಾಗೂ 36 ತಿಂಗಳು ಕಾಲಾವಕಾಶ (ಮಳೆಗಾಲದ ಅವಧಿ ಸೇರಿ) ನೀಡಲಾಗುತ್ತದೆ. ಹಾಲಿ ಹರಿವಿಗೆ ಅಡ್ಡಿಯಾಗದಂತೆ ಕಾಮಗಾರಿ ಕೈಗೊಳ್ಳುವ ಜತೆಗೆ ಸ್ಥಳೀಯ ಪ್ರದೇಶದಲ್ಲಿ ಜನರಿಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಭಾರಿ ಯಂತ್ರಗಳನ್ನು ಬಳಸುವ ವೇಳೆ ಸುರಕ್ಷತೆ ಕೈಗೊಳ್ಳಲು ಕಟ್ಟಪ್ಪಣೆ ಮಾಡಲಾಗಿದೆ. ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಆದ್ಯತೆ ನಿಡಿದ್ದು, ಆಯಾ ವಿಭಾಗದ ಹಿರಿಯ ಇಂಜಿನಿಯರ್‌ಗೆ ಮೇಲ್ವಿಚಾರಣೆ ವಹಿಸಲಾಗಿದೆ. ಒಟ್ಟಾರೆ ಮುಂದಿನ 3 ವರ್ಷದಲ್ಲಿ ಯೋಜನೆಯನ್ನು ಪೂರ್ಣಗೊಳಿಸಲು ಪಾಲಿಕೆ ಗಡುವು ವಿಧಿಸಿಕೊಂಡಿದೆ.
ಒತ್ತುವರಿ ತೆರವು ಸವಾಲು:
ನಗರದಲ್ಲಿ ರಾಜಕಾಲುವೆಗಳ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳದ ಕಾರಣ ಹೊಸದಾಗಿ ಒತ್ತುವರಿ ಪ್ರಕರಣಗಳು ವರದಿಯಾಗುತ್ತಿವೆ. ಇದು ನಗರ ಜಿಲ್ಲಾಡಳಿತ ಹಾಗೂ ಬಿಬಿಎಂಪಿಗೆ ಸವಾಲಾಗಿ ಪರಿಣಮಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 2,602 ಒತ್ತುವರಿ ಪ್ರಕರಣಗಳನ್ನು ಗುರುತಿಸಿದ್ದು, 1480 ಅನ್ನು ತೆರವುಗೊಳಿಸಲಾಗಿದೆ. ಉಳಿದವುಗಳಲ್ಲಿ ಕಡಿಮೆ ಪ್ರಮಾಣದ ಒತ್ತುವರಿ ಇದ್ದರೂ, ತೆರವಿಗೆ ಇಚ್ಛಾಶಕ್ತಿ ತೋರುತ್ತಿಲ್ಲ. ಹೀಗಾಗಿ ಮಹದೇವಪುರ ವಲಯದಲ್ಲಿ ಅತಿ ಹೆಚ್ಚು ಒತ್ತುವರಿ ತೆರವು ಬಾಕಿ ಅಲ್ಲಿಯೇ ಮಳೆಯಿಂದ ಸಾಕಷ್ಟು ಅನಾಹುತ ಸಂಭವಿಸುತ್ತಿವೆ. ಇತ್ತೀಚಿಗೆ ಸಿಎಂ ಅವರು ತೆರವು ಕಾರ್ಯ ಕೈಗೊಳ್ಳಲು ಸೂಚನೆ ನೀಡಿದ್ದರೂ, ತಾಂತ್ರಿಕ ಹಾಗೂ ನ್ಯಾಯಾಲಯದ ಆದೇಶ ನೆಪ ಮಾಡಿ ಪಾಲಿಕೆ ಮೌನಕ್ಕೆ ಶರಣಾಗಿದೆ.
ಸಮನ್ವಯಕ್ಕೆ ಶೀಘ್ರ ಸಭೆ:
ರಾಜಕಾಲುವೆ ಒತ್ತುವರಿ ತೆರವು ಸಂಬಂಧ ಸಮನ್ವಯ ಸಾಧಿಸಲು ಬಿಬಿಎಂಪಿ ಹಾಗೂ ಬೆಂಗಳೂರು ನಗರ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳ ಸಭೆ ಶೀಘ್ರ ನಡೆಯಲಿದೆ. ಹಳೆಯ ದಾಖಲೆಗಳನ್ನು ದೃಢೀಕರಿಸಿಕೊಂಡು ಕಾರ್ಯಾಚರಣೆ ಕೈಗೆತ್ತಿಕೊಳ್ಳಬೇಕಿರುವುದರಿಂದ ತೆರವು ಕೆಲಸ ಸ್ಥಗಿತಗೊಂಡಿದೆ. ಹೀಗಾಗಿ ದಾಖಲೆ ತಾಳೆ ಹಾಕಿ ಒಮ್ಮತ ನಿರ್ಧಾರಕ್ಕೆ ಬರಲು ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ವಿಶ್ವಬ್ಯಾಂಕ್ ನೆರವಿನಡಿ ಮಳೆನೀರುಗಾಲುವೆಗಳ ಪುನರ್ ನಿರ್ಮಾಣಕ್ಕಾಗಿ ಟೆಂಡರ್ ಆಹ್ವಾನಿಸಿದ್ದು, ಅಂತಿಮ ಹಂತದಲ್ಲಿದೆ. ಟೆಂಡರ್ ಪೂರ್ಣಗೊಂಡ ಬೆನ್ನಲ್ಲೇ ಕಾರ್ಯಾದೇಶ ನೀಡಿ ಗಡುವಿನೊಳಗೆ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗುವುದು. ಟೆಂಡರ್ ಪ್ಯಾಕೇಜ್ ಆಧರಿಸಿ ಕೆಲಸ ಮುಕ್ತಾಯಗೊಳಿಸಲು ಗಡುವು ಇರಲಿದೆ. ಯೋಜನೆ ಪೂರ್ಣಗೊಂಡಲ್ಲಿ ನಗರವು ಪ್ರವಾಹಮುಕ್ತ ಆಗುವ ವಿಶ್ವಾಶ ಇದೆ.
- ರಾಜೇಶ್, ಮುಖ್ಯ ಅಭಿಯಂತರ (ಎಸ್‌ಡಬ್ಲ್ಯುಡಿ ವಿಭಾಗ)