ಬೆಂಗಳೂರು: ನಮ್ಮ ಮೆಟ್ರೋ ಸಂಪರ್ಕ ಜಾಲವನ್ನು ನಗರದ ಹೊರವಲಯಕ್ಕೆ ವಿಸ್ತರಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಮುಂದಾಗಿದೆ. ಇದರ ಭಾಗವಾಗಿ ಮೆಟ್ರೋ ರೈಲು ಕಾರಿಡಾರ್ಗಳ ಮಾರ್ಗವನ್ನು 118 ಕಿ.ಮೀ. ವಿಸ್ತರಿಸಲು ಕಾರ್ಯಸಾಧ್ಯತಾ ಅಧ್ಯಯನ ವರದಿ ಸಿದ್ಧಪಡಿಸಲು ಟೆಂಡರ್ ಆಹ್ವಾನಿಸಿದೆ.
ಮಾ.27ರವರೆಗೆ ಬಿಡ್ಗಳನ್ನು ಸಲ್ಲಿಸಲು ಅವಕಾಶವಿದ್ದು, ಆರು ತಿಂಗಳಲ್ಲಿ ಕಾರ್ಯಸಾಧ್ಯತಾ ವರದಿಯನ್ನು ಸಲ್ಲಿಸಲು ಗಡುವು ನೀಡಲಾಗುವುದು ಎಂದು ಟೆಂಡರ್ನಲ್ಲಿ ಉಲ್ಲೇಖಿಸಿದೆ. ಇದು ಯೋಜನೆಯ ಮೊದಲ ಹಂತವಾಗಿದ್ದು, ಸರ್ಕಾರ ವರದಿಯನ್ನು ಸ್ವೀಕರಿಸಿದ ಬಳಿಕ ವಿಸತ ಯೋಜನಾ ವರದಿ ಸಿದ್ಧಪಡಿಸಲಾಗುತ್ತದೆ.
ಮೆಟ್ರೋ ಮಾರ್ಗ ವಿಸ್ತರಣೆ ಸಂಬಂಧ ಎರಡು ಪ್ಯಾಕೇಜ್ಗಳನ್ನಾಗಿ ವಿಂಗಡಿಸಲಾಗಿದೆ. ಒಂದನೇ ಹಂತದ ಪ್ಯಾಕೇಜ್ನಲ್ಲಿ 50 ಕಿ.ಮೀ. ಉದ್ದ ಮೂರು ಕಾರಿಡಾರ್ಗಳನ್ನು ಒಳಗೊಂಡಿವೆ. ಚಲ್ಲಟ್ಟದಿಂದ ಬಿಡದಿ, ರೇಷ್ಮೆ ಸಂಸ್ಥೆಯಿಂದ ಹಾರೋಹಳ್ಳಿ ಮತ್ತು ಬೊಮ್ಮಸಂದ್ರದಿಂದ ಅತ್ತಿಬೆಲೆಗೆ ಮೆಟ್ರೋ ವಿಸ್ತರಿಸಲು ಚಿಂತಿಸಲಾಗಿದೆ.
ಎರಡನೇ ಹಂತದ ಪ್ಯಾಕೇಜ್ನಲ್ಲಿ 68 ಕಿ.ಮೀ. ದೂರದ ಮಾರ್ಗ ಇರಲಿದೆ. ಕಾಳೇನ ಅಗ್ರಹಾರದಿಂದ (ಗೊಟ್ಟಿಗೆರೆ) ಜಿಗಣಿ, ಆನೇಕಲ್, ಅತ್ತಿಬೆಲೆ, ಸರ್ಜಾಪುರ, ವರ್ತೂರು, ಕಾಡುಗೋಡಿ ವೃಕ್ಷ ಉದ್ಯಾನವನ ವರೆಗೆ ಮಾರ್ಗ ಮೆಟ್ರೋ ಜಾಲ ವಿಸ್ತರಿಸಿಕೊಳ್ಳಲಿದೆ.