ಜಿಲ್ಲೆ

ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಬೆಂಗಳೂರು ಚಾಂಪಿಯನ್

ಮಡಿಕೇರಿ: ವಿರಾಜಪೇಟೆಯ ಬಾಳುಗೋಡಿನಲ್ಲಿ ಕೊಡವ ಸಮಾಜಗಳ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಕೊಡವ ನಮ್ಮೆ ಹಾಕಿಯಲ್ಲಿ ಮೂರ್ನಾಡು ಕೊಡವ ಸಮಾಜ ಗೆಲುವು ಸಾಧಿಸಿದರೆ, ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಬೆಂಗಳೂರು ಕೊಡವ ಸಮಾಜ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.


ಮಡಿಕೇರಿ ಕೊಡವ ಸಮಾಜ ಮತ್ತು ಮೂರ್ನಾಡು ಕೊಡವ ಸಮಾಜದ ನಡುವೆ ನಡೆದ ರೋಚಕ ಹಾಕಿ ಪಂದ್ಯದಲ್ಲಿ ೧-೦ ಗೋಲಿನಿಂದ ಮೂರ್ನಾಡು ಕೊಡವ ಸಮಾಜ ಜಯ ಸಾಧಿಸಿತು. ವಿಜೇತ ತಂಡಕ್ಕೆ ರೂ.೩೦,೦೦೦ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ.೨೦,೦೦೦ ನಗದು ಹಾಗೂ ಟ್ರೋಪಿಯನ್ನು ನೀಡಲಾಯಿತು.


ಕೊಡವ ನಮ್ಮೆಯ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಬೆಂಗಳೂರು ಕೊಡವ ಸಮಾಜ ೯ ಸ್ಪರ್ಧೆಗಳಲ್ಲಿ ಬಹುಮಾನ ಗೆಲ್ಲುವ ಮೂಲಕ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು. ಮೈಸೂರು ಕೊಡವ ಸಮಾಜ ೬ ಸ್ಪರ್ಧೆಗಳಲ್ಲಿ ಬಹುಮಾನ ಗೆದ್ದು ದ್ವಿತೀಯ ಸ್ಥಾನ ಹಾಗೂ ಮಡಿಕೇರಿ, ನಾಪೋಕ್ಲು ಮತ್ತು ಪೊನ್ನಂಪೇಟೆ ಕೊಡವ ಸಮಾಜಗಳು ತಲಾ ಎರಡು ಸ್ಪರ್ಧೆಗಳಲ್ಲಿ ಬಹುಮಾನ ಗೆದ್ದು ತೃತೀಯ ಸ್ಥಾನ ಗಳಿಸಿತು.


ಹಗ್ಗಜಗ್ಗಾಟದ ರೋಚಕ ಪಂದ್ಯಾವಳಿಯಲ್ಲಿ ಪುರುಷರ ವಿಭಾಗದಲ್ಲಿ ಅಮ್ಮತ್ತಿ ಕೊಡವ ಸಮಾಜದ ವಿರುದ್ಧ ನಾಪೋಕ್ಲು ಕೊಡವ ಸಮಾಜ ಹಾಗೂ ಮಹಿಳೆಯರ ವಿಭಾಗದಲ್ಲಿ ಮಡಿಕೇರಿ ಕೊಡವ ಸಮಾಜದ ವಿರುದ್ಧ ನಾಪೋಕ್ಲು ಕೊಡವ ಸಮಾಜ ಗೆಲುವು ದಾಖಲಿಸಿತು.


ಸಭಾ ಕಾರ್ಯಕ್ರಮ: ಕೊಡವರು ಒಗ್ಗಟ್ಟನ್ನು ಕಾಯ್ದುಕೊಳ್ಳುವ ಮೂಲಕ ಕೊಡವ ಆಚಾರ, ವಿಚಾರ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಪಣ ತೊಡಬೇಕೆಂದು ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾಕುಶಾಲಪ್ಪ ಕರೆ ನೀಡಿದರು. ಕೊಡವ ಸಮುದಾಯ ಅತ್ಯಂತ ಚಿಕ್ಕದಾಗಿದ್ದು, ಕೊಡವರ ಸಂಖ್ಯೆ ಹೆಚ್ಚಾಗಬೇಕಾಗಿದೆ ಎಂದರು.


ಮಾಜಿ ಸಚಿವ ಮೇರಿಯಂಡ ಸಿ.ನಾಣಯ್ಯ ಮಾತನಾಡಿ, ಸರ್ಕಾರ ನೀಡಿರುವ ರೂ.೧೦ ಕೋಟಿ ಅನುದಾನದಲ್ಲಿ ೬ ಕೋಟಿ ಬಾಳುಗೋಡು ಕೊಡವ ಸಮಾಜ, ೩ ಕೋಟಿ ೩೧ ಕೊಡವ ಸಮಾಜಗಳಿಗೆ ಮತ್ತು ೧ ಕೋಟಿ ರೂ. ಭಾಗಮಂಡಲದ ಕೊಡವ ಸಮುದಾಯ ಭವನಕ್ಕೆ ಹಂಚಿಕೆಯಾಗಲಿದೆ ಎಂದು ತಿಳಿಸಿದರು.


ಸ್ವಾಭಿಮಾನಿ ಕೊಡವರು ಒಗ್ಗಟ್ಟನ್ನು ಪ್ರದರ್ಶಿಸುವ ಅಗತ್ಯವಿದೆ. ಸರ್ಕಾರ ನೀಡಿದ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಕೊಡವ ಸಮುದಾಯ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಂತೆ ಸಲಹೆ ನೀಡಿದರು.


ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಎಲ್ಲಾ ೩೪ ಕೊಡವ ಸಮಾಜಗಳು ಹಾಗೂ ದಾನಿಗಳ ಸಹಕಾರದಿಂದ ನಾಲ್ಕು ದಿನಗಳ ಕೊಡವ ನಮ್ಮೆ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಯಾವುದೇ ಕಾರ್ಯಕ್ರಮ ಮಾಡಿದರೂ ಇದೇ ರೀತಿಯ ಒಗ್ಗಟ್ಟು ಮತ್ತು ಸಹಕಾರವನ್ನು ನೀಡಬೇಕೆಂದು ಮನವಿ ಮಾಡಿದರು.


ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾಅಚ್ಚಯ್ಯ, ರಾಜ್ಯ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ನಾಪಂಡ ರವಿಕಾಳಪ್ಪ, ಮಲ್ಲೇಂಗಡ ದಾದಾ ಬೆಳ್ಯಪ್ಪ, ಕ್ರೀಡಾ ಸಮಿತಿಯ ಅಧ್ಯಕ್ಷ ತಂಬುಕುತ್ತಿರ ಮಧು ಮಂದಣ್ಣ, ಆಹಾರ ಸಮಿತಿಯ ಅಧ್ಯಕ್ಷ ಕುಂಬೇರನ ಮನುಕುಮಾರ್, ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಕಾಳಿಮಾಡ ಮೋಟಯ್ಯ, ಒಕ್ಕೂಟದ ಖಜಾಂಚಿ ಚಿರಿಯಪಂಡ ಕಾಶಿಯಪ್ಪ, ಉಪಾಧ್ಯಕ್ಷರುಗಳಾದ ಮಾಳೇಟಿರ ಅಭಿಮನ್ಯು ಕುಮಾರ್, ಕರವಟ್ಟಿರ ಪೆಮ್ಮಯ್ಯ, ಮಾಲಚಿರ ಬೋಸ್ ಚಿಟ್ಟಿಯಪ್ಪ ಉಪಸ್ಥಿತರಿದ್ದರು.