ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಏಳನೇ ವೇತನ ಆಯೋಗದಿಂದ ಆಗಿರುವ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿ ಸೆ. 18ರಂದು ಬೆಂಗಳೂರು ಚಲೋ ಹೋರಾಟ ಹಾಗೂ 2 ಲಕ್ಷ ಪತ್ರ ಚಳವಳಿ ನಡೆಸಲು ನಿವೃತ್ತ ಸರ್ಕಾರಿ ನೌಕರರು ನಿರ್ಧರಿಸಿದ್ದಾರೆ.
ಇಲ್ಲಿನ ಶ್ರೀ ಸಿದ್ಧಾರೂಢಸ್ವಾಮಿ ಮಠದ ಆವರಣದ ಶ್ರೀ ನಿರಂಜನ ಸಭಾಭವನದಲ್ಲಿ ಕರ್ನಾಟಕ ನಿವೃತ್ತ ನೌಕರರ ವೇದಿಕೆಯಿಂದ ಗುರುವಾರ ಕರೆದಿದ್ದ ಬೆಳಗಾವಿ ವಿಭಾಗ ಮಟ್ಟದ ನಿವೃತ್ತ ನೌಕರರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಚಿಕ್ಕೋಡಿ, ಶಿರಸಿ ಶೈಕ್ಷಣಿಕ ಜಿಲ್ಲೆಗಳ 500ಕ್ಕೂ ಹೆಚ್ಚು ನೌಕರರು ಪಾಲ್ಗೊಂಡಿದ್ದರು.
6ನೇ ವೇತನ ಆಯೋಗದ ಬದಲಾಗಿ 7ನೇ ವೇತನ ಆಯೋಗದ ಶಿಫಾರಸ್ಸಿಗೆ ಅನುಗುಣನಾಗಿ ನಿವೃತ್ತ ಸರ್ಕಾರಿ ನೌಕರರಿಗೆ ಸೌಲಭ್ಯಗಳು ಸಿಗಬೇಕು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮನವರಿಕೆ ಮಾಡಲು ನಿರ್ಧರಿಸಲಾಯಿತು. ನಿಯೋಗದೊಂದಿಗೆ ತೆರಳಿ ರಾಜ್ಯದ ಮುಖ್ಯ ಕಾರ್ಯದರ್ಶಿ ಹಾಗೂ ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರನ್ನು ಭೇಟಿ ಮಾಡಿ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ನಿರ್ಣಯಿಸಲಾಗಿದೆ.
ರಾಜ್ಯದ ಎಲ್ಲ ಸಂಸದರಿಗೆ, ಸಚಿವರಿಗೆ, ಜಿಲ್ಲಾಧಿಕಾರಿಗಳಿಗೆ, ತಹಶೀಲ್ದಾರರಿಗೆ ಮನವಿ ಸಲ್ಲಿಸುವ, ಪ್ರತಿ ಜಿಲ್ಲೆ, ತಾಲೂಕುಗಳಲ್ಲಿ ಸಭೆ ನಡೆಸಿ ಹೋರಾಟ ರೂಪಿಸುವ, ನೌಕರರ ಪ್ರತಿ ಕುಟುಂಬದಿಂದ 10ರಂತೆ ಒಟ್ಟು 2 ಲಕ್ಷ ಪತ್ರ ಚಳುವಳಿ ನಡೆಸಲು ತೀರ್ವನಿಸಲಾಯಿತು.
ವೇದಿಕೆಯ ಸಂಸ್ಥಾಪಕ ಸಂಚಾಲಕರಾದ ಅಶೋಕ ಸಜ್ಜನ ಹಕ್ಕೊತ್ತಾಯ ಮಂಡಿಸಿದರು. ಎಂ.ಪಿ.ಎಂ.ಷಣ್ಮುಖಯ್ಯ ಅಧ್ಯಕ್ಷತೆ ವಹಿಸಿದ್ದರು. ಶಂಕತರ ಹೂಗಾರ, ಎಸ್.ಬಿ.ಪಾಟೀಲ, ಗುರು ತಿಗಡಿ, ವಿಜಯ ಅಣಜಿ, ಎ.ಎಫ್.ರೇಶ್ಮಿ, ಮಂಜುನಾಥ ರೆಡ್ಡಿ, ಶಂಕರಯ್ಯ ಸುಬ್ಬಾಪೂರಮಠ, ಇತರರು ಇದ್ದರು. ಎಸ್.ಬಿ.ಬಿಸಿರೊಟ್ಟಿ ಸ್ವಾಗತಿಸಿದರು.