ಮಂಡ್ಯ: ಕೆರಗೋಡು ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾಯಕರು ಮತ್ತು ಗ್ರಾಮಸ್ಥರ ಮೇಲೆ ಹಾಕಿರುವ ಪ್ರಕರಣವನ್ನು ಹೈಕೋರ್ಟ್‌ನಲ್ಲಿ ಖುಲಾಸೆ ಮಾಡಿಸುತ್ತೇನೆ ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಹೇಳಿದರು.
ತಾಲೂಕಿನ ಕೆರಗೋಡು ಗ್ರಾಮಕ್ಕೆ ಭೇಟಿ ಮಾಡಿ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ಪಡೆದು ಮಾತನಾಡಿದ ಅವರು, ಭಜನಾ ಮಂಡಳಿ ಮೇಲೆ ರಾಜ್ಯಸರ್ಕಾರ ಪ್ರಹಾರ ನಡೆಸಿದೆ. ಒಂದು ಶಾಂತಿ ಸಭೆಯನ್ನು ಮಾಡಿ ಇದನ್ನೆಲ್ಲ ಒಬ್ಬ ಅಧಿಕಾರಿ ಶಮನ ಮಾಡಬಹುದಿತ್ತು. ಹಳೇ ಪದ್ಧತಿಯನ್ನು ಪರಿಗಣನೆಗೆ ತೆಗೆದುಕೊಂಡಿದ್ದರೆ ಇಷ್ಟೆಲ್ಲ ಆಗುತ್ತಲೇ ಇರಲಿಲ್ಲ. ಇಲ್ಲಿನ ಆಚರಣೆಯನ್ನು ನಿಷೇಧಿಸಲು ಮುಖ್ಯಮಂತ್ರಿ ಅವರಿಗೆ ಅಧಿಕಾರ ಇದಿಯೇ ಎಂದು ಪ್ರಶ್ನಿಸಿದರು.
ಕರ್ನಾಟಕದಲ್ಲಿ ಪಾಕಿಸ್ತಾನದ ಧ್ವಜ ಹಾರಿಸುತ್ತಾರೆ. ಅದಕ್ಕೆ ಸರ್ಕಾರ ಕಡಿವಾಣ ಹಾಕುತ್ತಾ, ಅವರ ಬೆನ್ನಟ್ಟಿ ಜೈಲುಪಾಲು ಮಾಡುತ್ತಾರಾ?. ಅನೇಕ ಕಡೆ ಸರ್ಕಾರಿ ಜಾಗದಲ್ಲಿ ಮಂದಿರ ಮತ್ತು ದೇವಾಲಯ, ಮಸೀದಿಗಳಿವೆ. ಅವುಗಳನ್ನು ಕಬ್ಜ ತೆಗೆದುಕೊಳ್ಳುತ್ತಾ, ಆರ್ಟಿಕಲ್ 25ನಲ್ಲಿ ನಮ್ಮ ಆಧ್ಯಾತ್ಮಿಕ ಭಾವನೆಗಳಿಗೆ ಧಕ್ಕೆ ತರಬಾರದು ಎಂಬುದನ್ನು ಜಿಲ್ಲಾಡಳಿತ ಗಮನದಲ್ಲಿಟ್ಟುಕೊಂಡು ಮಂದಿರ, ದೇವಾಲಯಗಳನ್ನು ಕೆಡಗುವುವುದಿಲ್ಲ ಎಂದರು.
ಗ್ರಾಮ ಪಂಚಾಯಿತಿ ನಡಾವಳಿ ಪುಸ್ತಕಗಳನ್ನು ತೆಗೆದುಕೊಂಡು ಹೋಗಲು ತಾಪಂ ಇಒಗೆ ಅಧಿಕಾರವೇ ಇಲ್ಲ. ನಡಾವಳಿ ಪುಸ್ತಕ ಅಥವಾ ಕಡತಗಳನ್ನು ತೆಗೆದುಕೊಂಡಿದ್ದೀನಿ ಎಂದು ಹೇಳಲು ಕಾನೂನು ಎಲ್ಲಿದೆ. ಗ್ರಾಪಂ ಒಂದು ಸಾಂವಿಧಾನಿಕ ಸಂಸ್ಥೆ. ಇದರಲ್ಲಿ ಏಕಾಏಕಿ ಏನನ್ನೂ ತೆಗೆದುಕೊಂಡು ಹೋಗುವಂತಿಲ್ಲ. ಇದು ಅಕ್ಷಮ್ಯ ಅಪರಾಧ ಎಂದು ವಿವರಿಸಿದರು.