ಜಿಲ್ಲೆ

Bengaluru Bandh : ಬಂದೋಬಸ್ತ್‌ನಲ್ಲಿದ್ದ ಪೊಲೀಸರಿಗೆ ಕೊಟ್ಟ ಊಟದಲ್ಲಿ ಸಿಕ್ಕಿತು ಇಲಿ

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವ ವಿಚಾರದಲ್ಲಿ ಉಂಟಾಗಿರುವ ವಿವಾದ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿರ್ದೇಶನದಂತೆ ನೆರೆ ರಾಜ್ಯಕ್ಕೆ ನೀರು ಬಿಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಇಂದು ಕನ್ನಡ ಪರ ಸಂಘಟನೆಗಳು ಮತ್ತು ರೈತರು ಕರೆ ನೀಡಿರುವ ಬಂದ್‌ಗೆ ಬೆಂಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬಂದ್​​ನಲ್ಲಿ ಕಾರ್ಯನಿರತರಾಗಿರುವ ಪೊಲೀಸರಿಗೆ ಅಸಮರ್ಪಕ ಆಹಾರವನ್ನು ಪೂರೈಕೆ ಮಾಡಿರುವುದು ಬಯಲಾಗಿದೆ.

ಬೆಂಗಳೂರು ಬಂದ್‌ ಹಿನ್ನೆಲೆ ಬಂದೋಬಸ್ತ್‌ಗೆ ನಿಯೋಜನೆಗೊಂಡಿದ್ದ ಪೊಲೀಸರಿಗೆ ನೀಡಿದ್ದ ಬೆಳಗಿನ ತಿಂಡಿ ಪ್ಯಾಕೆಟ್‌ನಲ್ಲಿ ಇಲಿಯೊಂದು ಪತ್ತೆಯಾಗಿದೆ.

ಯಶವಂತಪುರ ಸಂಚಾರಿ ಪೊಲೀಸರಿಗೆ ನೀಡಿದ ಬೆಳಗ್ಗಿನ ಉಪಹಾರದಲ್ಲಿ ಸತ್ತ ಇಲಿ ಪತ್ತೆಯಾಗಿದೆ. ಉಪಹಾರವೆಂದು ರೈಸ್ ಬಾತ್ ನೀಡಲಾಗಿದೆ. ಈ ವೇಳೆ ಪೊಲೀಸ್ ಆ ಪೊಟ್ಟಣವನ್ನು ಓಪನ್ ಮಾಡಿದಾಗ ಇಲಿ ಕಂಡು ಗಾಬರಿಯಾಗಿದ್ದಾರೆ. ಪೊಲೀಸರಿಗೆ ‘ಇಲಿ’ ಇರುವ ಉಪಹಾರ ನೀಡಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ಯಶವಂತಪುರದಲ್ಲಿರುವ ಅಶೋಕ್ ಟಿಫಿನ್ ಸೆಂಟರ್‌ನಲ್ಲಿ ಒಟ್ಟು 180 ಜನಕ್ಕೆ ತಿಂಡಿಯನ್ನು ಸಿದ್ದಪಡಿಸಿಲಾಗಿತ್ತು. ಬೆಳಗ್ಗೆ 7-30ಕ್ಕೆ ತಿಂಡಿಯನ್ನು ವಿತರಿಸಲಾಗಿದೆ. ಈ ವೇಳೆ ಸಿಬ್ಬಂದಿಯೊಬ್ಬರು ಪ್ಯಾಕೆಟ್‌ ತೆರೆದಾಗ ಇಲಿ ಪತ್ತೆಯಾಗಿದೆ. ಕೂಡಲೇ ತಮ್ಮ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ತಿಂಡಿ ತಿನ್ನದಂತೆ ಇತರೆ ಸಿಬ್ಬಂದಿಗೆ ತಿಳಿಸಿದ್ದಾರೆ. ಹೀಗಾಗಿ ಯಾವ ಸಿಬ್ಬಂದಿ ತಿಂಡಿ ಸೇವಿಸಿಲ್ಲ. ಇದರಿಂದ ಆಗಬಹುದಾದ ಅನುಹಾತವೊಂದು ತಪ್ಪಿದೆ ಎನ್ನಲಾಗಿದೆ.