ಬೆಂಗಳೂರು: ಅಂಬುಲೆನ್ಸ್ಗೆ ದಾರಿ ಮಾಡಿ ಕೊಡಲು ಹೋಗಿ ಕಾರೊಂದು ಪಲ್ಟಿಯಾಗಿರುವ ಘಟನೆ ಬೆಂಗಳೂರು ನಗರದ ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆಯಲ್ಲಿ ನಡೆದಿದೆ. ಸೋಮವಾರ (ಆಗಸ್ಟ್ 19) ಸಂಜೆ ಈ ಘಟನೆ ಸಂಭವಿಸಿದ್ದು, ಕಾರು ಅಪಘಾತಕ್ಕೀಡಾಗುತ್ತಿರು ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಐಟಿ ಸಿಟಿ ಬೆಂಗಳೂರಿನ ಅತಿ ಉದ್ದನೆಯ ಸೇತುವೆಯ ಮೇಲೆ ಈ ಅಪಘಾತ ಸಂಭವಿಸಿದ್ದು, ವಿಡಿಯೋ ನೋಡಿದರೆ ಎಂತಹವರು ಕೂಡ ಒಂದು ಕ್ಷಣ ಬೆಚ್ಚಿ ಬೀಳುತ್ತಾರೆ. ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಫ್ಲೈಓವರ್ ಮೇಲೆ ವೇಗವಾಗಿ ಬರುತ್ತಿರುವ ಅಂಬುಲೆನ್ಸ್ಗೆ ದಾರಿ ಮಾಡಿ ಕೊಡಲು ಹೋಗಿ ಪಕ್ಕದಲ್ಲೇ ಚಲಿಸುತ್ತಿದ್ದ ಇ ಸ್ಕೂಟರ್ಗೆ ಡಿಕ್ಕಿ ಹೊಡೆದು ಪಲ್ಟಿಯಾಗುತ್ತದೆ. ಈ ವಿಡಿಯೋ ಮುಂಬದಿ ಚಲಿಸುತ್ತಿದ್ದ ಕಾರಿನ ಡ್ಯಾಶ್ಬೋರ್ಡ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.
ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದು, ಕೂಡಲೇ ಅವರನ್ನು ಬೇರೊಂದು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ಸಂಭವಿಸಿದ ಪರಿಣಾಮ ಪ್ಲೈಓವರ್ ಮೇಲೆ ನಡೆದ ಘಟನೆಯ ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಂಚಾರಿ ಪೊಲೀಸರ ಭೇಟಿ ಪರಿಶೀಲನೆ ಮಾಡಿದ್ದಾರೆ. ಈ ಘಟನೆಯ ಸಂಚಾರಿ ಪೊಲೀಸರು ಘಟನೆ ನಡೆದ ಸ್ಥಳದಲ್ಲಿ ಬ್ಯಾರಿಕೆಡ್ ಅಳವಡಿಸಿ ಉಳಿದ ರಸ್ತೆಯ ಭಾಗದಲ್ಲಿ ವಾಹನಗಳು ಸುಗಮವಾಗಿ ಸಂಚಾರ ಮಾಡುವುದಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.