ನಂದಗುಡಿ: ಉತ್ತಮ ರಸ್ತೆಗಳಿಂದ ಮಾತ್ರ ಗ್ರಾಮಾಂತರ ಪ್ರದೇಶಗಳ ಇನ್ನಿತರ ಅಭಿವೃದ್ಧಿ ಕೆಲಸಗಳು ಚುರುಕುಪಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಿದೆ ಎಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಖಾತೆ ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ಹೋಬಳಿಯ ವ್ಯಾಪ್ತಿಯ ಗಂಗಾಪುರ, ಹೆತ್ತಕ್ಕಿ ಹಾಗೂ ಲಿಂಗಾಪುರ ಗ್ರಾಮಗಳಲ್ಲಿ ಸೋಮವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 5054 ವಿಶೇಷ ಅನುದಾನದಡಿ 45 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಗುಣಮಟ್ಟದ ರಸ್ತೆಗಳು ನಿರ್ಮಾಣವಾಗಬೇಕು. ಕಾಮಗಾರಿಗಳು ಜನರ ಮನಸ್ಸಿಗೆ ಸಮಾಧಾನ ತರುವಂತಿರಬೇಕು. ಹಣದಾಸೆಯಿಂದ ಕಳಪೆ ಕಾಮಗಾರಿ ನಡೆಸಿದರೆ ಅಂಥವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು. ಚುನಾಯಿತ ಪ್ರತಿನಿಧಿಗಳಿಗೆ ಅಧಿಕಾರ ಶಾಶ್ವತವಲ್ಲ. ಅಧಿಕಾರ ಇರುವಾಗ ಪ್ರಾಮಾಣಿಕವಾಗಿ ಜನಸೇವೆ ಮಾಡಬೇಕು, ಇಂಥ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಸಿಕ್ಕ ಅವಕಾಶ ಸದ್ಬಳಕೆ ಮಾಡಿಕೊಂಡು ಜನರ ಸೇವೆ ಮಾಡಬೇಕು ಎಂಬ ತತ್ವ ಸಿದ್ಧಾಂತದಂತೆ ನಡೆದುಕೊಳ್ಳುತ್ತಿದ್ದೇನೆ ಎಂದರು.
ಈ ಭಾಗದ ಜನರ ಬಹುದಿನದ ಬೇಡಿಕೆಯಂತೆ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ, ಕಾಮಗಾರಿಗಳು ಪ್ರಾರಂಭಿಸಿದಾಗ, ಸ್ಥಳಿಯ ಮುಖಂಡರು ರಾಜಕಾರಣ ಬದಿಗೊತ್ತಿ ಪರಸ್ಪರ ಸಹಕಾರ ನೀಡಿದರೆ ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ಚುರುಕುಗೊಳ್ಳುತ್ತವೆ ಎಂದರು.
ಕಳಪೆಯಾದರೆ ಕಪ್ಪುಪಟ್ಟಿ: ಗ್ರಾಮಗಳ ಅಭಿವೃದ್ಧಿಗಾಗಿ ಸರ್ಕಾರ ನೂರಾರು ಕೋಟಿ ರೂ.ಅನುದಾನ ಬಿಡುಗಡೆ ಮಾಡುತ್ತಿದೆ, ಆದ್ಯತೆ ಮೇರೆಗೆ ರಸ್ತೆ ಅಭಿವೃದ್ಧಿ ಕೆಲಸಕ್ಕೆ ಚಾಲನೆ ನೀಡಲಾಗುತ್ತಿದೆ. ಅಭಿವೃದ್ಧಿ ಕಾಮಗಾರಿಗಳಲ್ಲಿ ಕಳಪೆ ಕಂಡುಬಂದಲ್ಲಿ, ಸಂಬಂಧಪಟ್ಟ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.
ಒಬಳಹಳ್ಳಿಯಲ್ಲಿ ಕಾಮಗಾರಿ: ನಂದಗುಡಿ ಹೋಬಳಿಯ ಒಬಳಹಳ್ಳಿ ಗ್ರಾಮದಲ್ಲಿ ಸೋಮವಾರ 15 ಲಕ್ಷ ರೂ. ವೆಚ್ಚದ ಸಿ.ಸಿ. ರಸ್ತೆ ಕಾಮಗಾರಿಗೆ ಸಚಿವ ಎಂಟಿಬಿ ನಾಗರಾಜ್ ಗುದ್ದಲಿ ಪೂಜೆ ನೆರವೇರಿಸಿದರು. ಎಪಿಎಂಸಿ ಮಾಜಿ ನಿರ್ದೇಶಕ ಚಂದ್ರಮೋಹನ್, ಮಾಜಿ ಸದಸ್ಯರಾದ ರಾಜಪ್ಪ, ದೇವರಾಜ್, ಮುಖಂಡರಾದ ಮುನಿಚನ್ನಪ್ಪ, ವೆಂಕಟೇಶಪ್ಪ, ಶ್ರೀಹರಿ, ಎಸ್.ಎಲ್. ವೆಂಕಟೇಶ್, ಗೋವಿಂದರಾಜು, ಅಂಗಡಿ ನರಸಿಂಹಪ್ಪ, ಹುಳವನಹಳ್ಳಿ ಚಂದಪ್ಪ ಇದ್ದರು.