ಜಿಲ್ಲೆ

ಕಡಲೆಗೆ ಆವರಿಸಿದೆ ಸಿಡಿ ರೋಗ

ವಿವೇಕಾನಂದ ದಾಸನಕೊಪ್ಪ

ಉಪ್ಪಿನಬೆಟಗೇರಿ: ಹಿಂಗಾರು ಬಿತ್ತನೆ ಮಾಡಿದ್ದ ಕಡಲೆ ಬೆಳೆ ಉತ್ತಮ ಇಳುವರಿ ನೀಡುವುದೆಂಬ ಖುಷಿಯಲ್ಲಿದ್ದ ರೈತರಿಗೆ ಬರ ಸಿಡಿಲಿನಂತೆ ಸಿಡಿ (ಬೆಂಕಿ ರೋಗ) ರೋಗ ಕಾಣಿಸಿಕೊಂಡಿದ್ದು, ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಅಮ್ಮಿನಬಾವಿ ಹಾಗೂ ಗರಗ ಹೋಬಳಿ ಮಟ್ಟದಲ್ಲಿ ಬಹುತೇಕ ರೈತರು ಕಡಲೆ ಬೆಳೆಯನ್ನು ಅಧಿಕವಾಗಿ ಬೆಳೆದಿದ್ದು, ಈ ರೋಗದಿಂದ ಫಸಲು ಎಲ್ಲಿ ಕೈ ಕೊಡುತ್ತದೆ ಎಂಬ ಆತಂಕ ರೈತರಲ್ಲಿ ಮನೆ ಮಾಡುವಂತಾಗಿದೆ. ಬೆಳೆದು ನಿಂತ ಪೈರು ರೋಗ ಬಾಧೆಯಿಂದ ನಲುಗುತ್ತಿದೆ.

ಅಮ್ಮಿನಬಾವಿ ಹೋಬಳಿಯ ಉಪ್ಪಿನಬೆಟಗೇರಿ, ಹನುಮನಾಳ, ಯಾದವಾಡ, ಹನುಮನಕೊಪ್ಪ, ಕರಡಿಗುಡ್ಡ, ಪುಡಕಲಕಡ್ಡಿ, ಗರಗ ಹೋಬಳಿಯಲ್ಲಿ ಯಾದವಾಡ, ಶಿಬಾರಗಟ್ಟಿ, ಸೇರಿದಂತೆ ಹಲವು ಗ್ರಾಮಗಳಲ್ಲಿ ರೋಗ ಕಂಡು ಬಂದಿದ್ದು, ಕೆಲ ರೈತರು ಕಡಲೆ ಫಸಲು ಕೈಗೆಟುಕುವ ನಿರೀಕ್ಷೆಯನ್ನೇ ಕಳೆದುಕೊಂಡಿದ್ದಾರೆ. ಬಿತ್ತಿದ ಹೊಲದಲ್ಲಿ ಅಲ್ಲಲ್ಲಿ ಬೆಳೆ ಸಂಪೂರ್ಣ ಒಣಗಿ ಹೋಗುತ್ತಿದ್ದು, ಸಿಡಿ ರೋಗ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹಿಂಗಾರು ಕಡಲೆ ಬೆಳೆಗೆ ಬೀಜ, ಗೊಬ್ಬರ, ಔಷಧ ಸಿಂಪಡಣೆ ಸೇರಿದಂತೆ ಸಾಕಷ್ಟು ಖರ್ಚು ಮಾಡಿ ಬೆಳೆದ ಕಡಲೆ ಬೆಳೆಯು ರೈತರಿಗೆ ಆಸರೆಯಾಗುವ ನಿರೀಕ್ಷೆ ಹುಸಿಯಾಗಿದೆ.

ಸಮಯಕ್ಕೆ ಸರಿಯಾಗಿ ಬಿತ್ತನೆ ಮಾಡಿದರೂ ಕಡಲೆ ಬೆಳೆಗೆ ಬೆಂಕಿ ರೋಗ ತಗುಲಿದೆ. ರೋಗ ನಿಯಂತ್ರಣಕ್ಕೆ ದುಬಾರಿ ಔಷಧ ಸಿಂಪಡಣೆ ಮಾಡಿದರೂ ರೋಗ ಹತೋಟಿಗೆ ಬಂದಿಲ್ಲ. 2.5 ಎಕರೆಯಲ್ಲಿ ಬೆಳೆದ ಕಡಲೆ ಬೆಳೆಗೆ ಸಂಪೂರ್ಣವಾಗಿ ಸಿಡಿ ರೋಗ ತಗುಲಿದೆ. | ಶಂಕರ ಓರಣಕರ, ಉಪ್ಪಿನಬೆಟಗೇರಿ ರೈತ ಸಿಡಿ ರೋಗದ ಕುರಿತು ಈಗಾಗಲೇ ಕೃಷಿ ವಿವಿ ಹಾಗೂ ಕೃಷಿ ಇಲಾಖೆಯಿಂದ ಪರಿಶೀಲನೆ ಮಾಡಲಾಗಿದೆ. ಅಧಿಕ ತೇವಾಂಶ, ಇಲ್ಲವೆ ಮುಂಗಾರಿನಲ್ಲಿ ಹೆಸರು ಬಿತ್ತನೆ ಮಾಡಿ ನಂತರ ಅದೇ ಭೂಮಿಗೆ ದ್ವಿದಳ ಧಾನ್ಯ ಬಿತ್ತನೆ ಮಾಡಿದರೆ ಇಂತಹ ಸಮಸ್ಯೆ ಕಂಡು ಬರುತ್ತವೆ. ಹಿಂಗಾರು ಮತ್ತು ಮುಂಗಾರು ಬೆಳೆಗಳನ್ನು ಬದಲು ಮಾಡುತ್ತ ಹೋದರೆ, ಈ ಸಮಸ್ಯೆ ಉದ್ಭವಿಸುವುದಿಲ್ಲ. | ಎಚ್.ಎಂ. ಬಾದಾಮಿ, ಸಹಾಯಕ ಕೃಷಿ ಅಧಿಕಾರಿ ಅಮ್ಮಿನಬಾವಿ