ಉಡುಪಿ: ಮಿಷನ್ ಇಂದ್ರಧನುಷ್ ಲಿಸಿಕಾ ಅವಧಿಯಲ್ಲಿ ಜಿಲ್ಲೆಯ 5 ವರ್ಷದೊಳಗಿನ ಮಕ್ಕಳು ಹಾಗೂ ಗರ್ಭಿಣಿಯರು, ಲಸಿಕೆ ವಂಚಿತ ಮಕ್ಕಳು ದಡಾರ ರುಬೆಲ್ಲಾ ಇನ್ನಿತರ ನಿಗದಿತ ಲಸಿಕೆ ಪಡೆದು ಆರೋಗ್ಯವಂತ ಜಿಲ್ಲೆಯನ್ನಾಗಿಸಲು ಕೊಡುಗೆ ನೀಡಬೇಕು ಎಂದು ಶಾಸಕ ಯಶ್ಪಾಲ್ ಸುವರ್ಣ ತಿಳಿಸಿದರು.
ಸೋಮವಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೆ.11 ರಿಂದ 16 ರವರೆಗೆ ನಡೆಯುವ ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಲಸಿಕಾ ಅಭಿಯಾನ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಜಿಲ್ಲಾಧಿಕಾರಿ ಡಾ ವಿದ್ಯಾ ಕುಮಾರಿ ಮಾತನಾಡಿ, ಲಸಿಕೆ ವಂಚಿತ ಮಕ್ಕಳು ಎರಡನೇ ಸುತ್ತಿನ ಪರಿಣಾಮಕಾರಿ ಮಿಷನ್ ಇಂದ್ರಧನುಷ್ ಲಸಿಕಾ ಕಾರ್ಯಕ್ರಮದ ಪ್ರಯೋಜನ ಪಡೆಯಬೇಕು. ಸಾರ್ವಜನಿಕರು ಈ ಅವಕಾಶವನ್ನು ಬಳಸಿಕೊಂಡು ಸ್ಥಸ್ಥ ಸಮಾಜದ ನಿಮಾರ್ಣಕ್ಕೆ ಸಹಕರಿಸುವಂತೆ ಹೇಳಿದರು.
ನಗರಸಭಾ ಸದಸ್ಯೆ ರಶ್ಮೀ ಚಿತ್ತರಂಜನ್, ಪೌರಾಯುಕ್ತ ರಾಯಪ್ಪ, ಜಿಲ್ಲಾ ಆರ್.ಸಿ.ಎಚ್.ಅಧಿಕಾರಿ ಡಾ. ರಾಮ್, ಜಿಲ್ಲಾ ಸರ್ಜನ್ ಡಾ. ವೀಣಾ ಮೊದಲಾದವರು ಉಪಸ್ಥಿತರಿದ್ದರು.