ಜಿಲ್ಲೆ

ಗೃಹಲಕ್ಷ್ಮಿ ಕಾರ್ಯಕ್ರಮ ವೀಕ್ಷಿಸಿದ ಫಲಾನುಭವಿಗಳು

Haveri - Desk - Ganapati Bhat

ಶಿಗ್ಗಾಂವಿ(ಗ್ರಾ): ರಾಜ್ಯ ಸರ್ಕಾರದ ನಾಲ್ಕನೇ ಗ್ಯಾರಂಟಿ ಗೃಹಲಕ್ಷ್ಮಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಚಾಲನೆ ನೀಡಿದ ಕಾರ್ಯಕ್ರಮವನ್ನು ತಾಲೂಕಿನ 28 ಗ್ರಾಮ ಪಂಚಾಯಿತಿ ಸೇರಿದಂತೆ ಬಂಕಾಪುರ ಪುರಸಭೆ ವ್ಯಾಪ್ತಿಯಲ್ಲಿ ಮೂರು, ಶಿಗ್ಗಾಂವಿ ಪುರಸಭೆ ವ್ಯಾಪ್ತಿಯಲ್ಲಿ ಮೂರು ಕಡೆಗಳಲ್ಲಿ ಏಕಕಾಲಕ್ಕೆ ವೀಕ್ಷಣೆ ಮಾಡಲಾಯಿತು.

ಗೃಹಲಕ್ಷ್ಮಿ ಯೋಜನೆ ಚಾಲನೆ ಕಾರ್ಯಕ್ರಮಕ್ಕೂ ಮುನ್ನ ಪ್ರತಿ ಗ್ರಾಮ ಪಂಚಾಯಿತಿ ಸಭಾಭವನ ಮತ್ತು ಪುರಸಭೆಗಳು ಆಯೋಜಿಸಿದ್ದ ಸ್ಥಳಗಳಲ್ಲಿ ಸಿಬ್ಬಂದಿ ಫಲಾನುಭವಿಗಳ ಸ್ವಾಗತಕ್ಕೆ ಪೆಂಡಾಲ್ ಹಾಕಿ, ಆವರಣವನ್ನು ರಂಗೋಲಿಯಿಂದ ಅಲಂಕಾರಗೊಳಿಸಿದ್ದರು. ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಪ್ರತಿ ಮನೆ ಮನೆಗೆ ತೆರಳಿ ಕಾರ್ಯಕ್ರಮ ವೀಕ್ಷಣೆಗೆ ಮಹಿಳೆಯರನ್ನು ಕರೆ ತರುವ ದೃಶ್ಯ ಕಂಡು ಬಂತು. ನೇರ ಪ್ರಸಾರದ ವೀಕ್ಷಣಾ ಸ್ಥಳದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಲಘು ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.

ಶಿಗ್ಗಾಂವಿ ತಾಲೂಕಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ಹೆಸರು ನೋಂದಾಯಿಸಿಕೊಂಡಿರುವ ಅರ್ಹ 41,096 ಫಲಾನುಭವಿಗಳ ಖಾತೆಗೆ ಬುಧವಾರ 2000 ರೂ. ನೇರವಾಗಿ ಜಮಾ ಆಗಲಿದೆ ಎಂದು ತಹಸೀಲ್ದಾರ್ ಸಂತೋಷ ಹಿರೇಮಠ ಮಾಹಿತಿ ನೀಡಿದ್ದಾರೆ.