ನಗರ ಆಶ್ರಯ ಸಮಿತಿ ಸಭೆ ರದ್ದಾಗಿದ್ದಕ್ಕೆ ಸಮಿತಿ ಅಧ್ಯಕ್ಷ ಎಸ್.ಎನ್.ಚನ್ನಬಸಪ್ಪ ಅವರು ಕಾರ್ಯದರ್ಶಿ ಡಾ. ಕವಿತಾ ಯೋಗಪ್ಪನವರ್ ಅವರನ್ನು ತರಾಟೆಗೆ ತೆಗೆದುಕೊಂಡರು. 
ಜಿಲ್ಲೆ

ಆಶ್ರಯ ಸಮಿತಿ ಕಾರ್ಯದರ್ಶಿಗೆ ಫಲಾನುಭವಿಗಳ ದಿಗ್ಬಂಧನ

ಶಿವಮೊಗ್ಗ: ನಗರದ ಗೋವಿಂದಾಪುರದಲ್ಲಿ ಆಶ್ರಯ ಮನೆಗಳ ಹಂಚಿಕೆ ಕುರಿತು ಶನಿವಾರ ನಿಗದಿಯಾಗಿದ್ದ ಸಭೆ ರದ್ದುಗೊಳಿಸಿದ್ದನ್ನು ಖಂಡಿಸಿ ನಗರ ಆಶ್ರಯ ಸಮಿತಿ ಅಧ್ಯಕ್ಷ, ಶಾಸಕ ಎಸ್.ಎನ್.ಚನ್ನಬಸಪ್ಪ ನೇತೃತ್ವದಲ್ಲಿ ನೂರಾರು ಫಲಾನುಭವಿಗಳು ಸಮಿತಿ ಕಾರ್ಯದರ್ಶಿ ಡಾ. ಕವಿತಾ ಯೋಗಪ್ಪನವರ್ ಅವರಿಗೆ ದಿಗ್ಬಂಧನ ಹಾಕಿ ಪ್ರತಿಭಟಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್ ಅವರ ಅಣತಿಯಂತೆ ಕಾರ್ಯದರ್ಶಿಗಳು ಏಕಾಏಕಿ ಸಭೆಯನ್ನು ರದ್ದು ಮಾಡಿರುವ ಕ್ರಮ ಅಕ್ಷಮ್ಯ. ಈ ಮೂಲಕ ಬಡವರ ಬದುಕಲ್ಲಿ ಚೆಲ್ಲಾಟವಾಡುತ್ತಿರುವುದು ಅತ್ಯಂತ ನೀಚ ಸಂಗತಿ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಕಿಡಿಕಾರಿದರು. ಇಂದೇ ಲಾಟರಿ ಮೂಲಕ ಆಯ್ಕೆ ಮಾಡಬೇಕು. ಇಲ್ಲವಾದರೆ ನಮ್ಮ ಹಣ ವಾಪಸ್ ಕೊಡಿ ಎಂದು ಫಲಾನುಭವಿಗಳು ಪಟ್ಟು ಹಿಡಿದರು.

ವಾದ-ವಾಗ್ವಾದದ ನಡುವೆ ಕುವೆಂಪು ರಂಗಮಂದಿರದಿಂದ ಕಾರ್ಯದರ್ಶಿಗಳು ತೆರಳಲು ಮುಂದಾದ ಕಾರಣ ಮುಖ್ಯದ್ವಾರಕ್ಕೆ ಬಿಗ ಜಡಿದು ಪ್ರತಿಭಟಿಸಿದರು. ವಾಹನ ಅಡ್ಡಗಟ್ಟಿ ದಿಗ್ಬಂಧನ ಹಾಕಿದ್ದರು. ಪ್ರತಿಭಟನೆ ಕಾವು ಹೆಚ್ಚಾಗುವುದನ್ನು ಅರಿತ ಕಾರ್ಯದರ್ಶಿ ಡಾ. ಕವಿತಾ ಯೋಗಪ್ಪನವರ್ ಫಲಾನುಭವಿಗಳ ಪ್ರತಿಭಟನೆ ನಡುವೆಯೇ ವಾಹನದಿಂದ ಕೆಳಗಿಳಿದು ತೆರಳಲು ಮುಂದಾದ ಮಹಾನಗರ ಪಾಲಿಕೆಯತ್ತ ಹೆಜ್ಜೆ ಹಾಕಿದರು. ಮುಖ್ಯದ್ವಾರ ತೆರೆಯುವ ಸಂಬಂಧ ಫಲಾನುಭವಿಗಳು ಮತ್ತು ಪೊಲೀಸರ ನಡುವೆ ತಳ್ಳಾಟವೂ ನಡೆಯಿತು. ಕಾರ್ಯದರ್ಶಿಗಳ ಜತೆಗೆ ಖಾಕಿ ಪಡೆ ಮೇಲೂ ಫಲಾನುಭವಿಗಳು ಅಸಮಾಧಾನ ಹೊರಹಾಕಿದರು.