ವಿಜಯವಾಣಿ ಸುದ್ದಿಜಾಲ ಧಾರವಾಡ
ಬೇಂದ್ರೆಯವರು ಯಾರೊಂದಿಗೆ ಮಾತನಾಡಿದರೂ ಅವರವರ ಜ್ಞಾನ, ಕ್ಷೇತ್ರಕ್ಕೆ ಸಂಬಂಧಿಸಿದ ತಳಹದಿ, ತತ್ವಗಳನ್ನು ಆಧರಿಸಿಕೊಂಡೇ ಚರ್ಚಿಸುತ್ತಿದ್ದರು. ಅವರದ್ದು ವಿಶ್ವತೋಮುಖ ಪ್ರತಿಭೆಯಾದ್ದರಿಂದ ಅವರ ಜೀವನ ಚರಿತ್ರೆಯನ್ನು ಯಾರೂ ಬರೆಯಲು ಸಾಧ್ಯವಿರಲಿಲ್ಲ ಎಂದು ಸಾಹಿತಿ ಪ್ರೊ. ಎಚ್. ಆರ್. ಅಮರನಾಥ ಅಭಿಪ್ರಾಯಪಟ್ಟರು.
ನಗರದ ಸಾಧನಕೇರಿಯ ಚೈತ್ರದ ಸಭಾಂಗಣದಲ್ಲಿ ಸಾಹಿತ್ಯಿಕ ಸಂಘಟನೆ ಅನ್ವೇಷಣ ಕೂಟ ವತಿಯಿಂದ ಶನಿವಾರ ಏರ್ಪಡಿಸಿದ್ದ ರಂಗಕರ್ಮಿ ರುಘುನಂದನ ಬೆಂಗಳೂರು ವಿರಚಿತ ತುಯ್ತವೆಲ್ಲ ನವ್ಯದತ್ತ ಕೃತಿ ಸಮೀಕ್ಷೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾತ್ರಿ ಕಳೆದು ಬೆಳಗಾಗುವುದರಲ್ಲಿ 12 ಕವಿತೆಗಳನ್ನು ಬರೆದ ಅದ್ಭುತ ಚೈತನ್ಯದ ಬೇಂದ್ರೆ ಮೇಲ್ನೋಟಕ್ಕೆ ವಾಚಾಳಿ ಎನಿಸಿದರೂ, 2 ಮೌನ ಸಪ್ತಾಹಗಳಲ್ಲಿ ಭಾಗವಹಿಸಿದ್ದ ದಾಖಲೆಗಳಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ. ಶ್ಯಾಮಸುಂದರ ಬಿದರಕುಂದಿ ಮಾತನಾಡಿ, ಬೇಂದ್ರೆಯವರು ತಮ್ಮ ಆತ್ಮ ಚರಿತ್ರೆಯಲ್ಲಿ ಗುರು ಚತುಷ್ಟ ಅವರನ್ನು ಸ್ಮರಿಸಿದ್ದನ್ನು ಉಲ್ಲೆಖಿಸಿ ಅರವಿಂದರ ದರ್ಶನವು ಅನೇಕ ಕನ್ನಡ ಕವಿಗಳ ಮೇಲೆ ಸಕಾರಾತ್ಮಕ ಪ್ರಭಾವ ಬೀರಿದೆ ಎಂದು ಪ್ರತಿಪಾದಿಸಿದ ಅವರು, ಮನುಷ್ಯತ್ವದ ಪರಿಕಲ್ಪನೆ ಬೇಂದ್ರೆಯವರಲ್ಲಿ ಪಾಶ್ಚಾತ್ಯರಿಗಿಂತ ವಿಭಿನ್ನವಾಗಿತ್ತು ಎಂದು ವಿವರಿಸಿದರು.
ನಂತರ ನಡೆದ ಸಂವಾದದಲ್ಲಿ ಪ್ರೊ. ದುಷ್ಯಂತ ನಾಡಗೌಡ, ಡಾ. ಕೃಷ್ಣ ಕಟ್ಟಿ, ಮಹಾಬಲೇಶ್ವರ ಸಿಂದಗಿ, ಡಾ. ಶಶಿಧರ ನರೇಂದ್ರ, ಇತರರು ಅಭಿಪ್ರಾಯ ಹಂಚಿಕೊಂಡರು.
ಅನ್ವೇಷಣಕೂಟದ ಅಧ್ಯಕ್ಷ ನರಸಿಂಹ ಪರಾಂಜಪೆ, ಅನಿಲ ಕಾಖಂಡಿಕಿ, ಡಾ. ಆನಂದ ಪಾಟೀಲ, ಶ್ರೀನಿವಾಸ ಹುದ್ದಾರ, ಪ್ರಕಾಶ ಗರುಡ, ಜಿ.ಆರ್.ಭಟ್ಟ, ಶ್ರೀಧರ ಗಾಂವಕರ, ಅನಂತ ಸಿದ್ಧೇಶ್ವರ, ಎಸ್.ಬಿ. ದ್ವಾರಪಾಲಕ, ರಮೇಶ ನಾಡಗೀರ, ಎಂ. ಎ. ಕಾಮಟೆ, ಕುಮಾರಸ್ವಾಮಿ ಪುರಾಣಿಕಮಠ, ಎಸ್.ಎಂ. ದೇಶಪಾಂಡೆ, ಎಸ್.ಎಸ್. ಬಂಗಾರಿಮಠ, ಬಿ.ಜಿ. ಗುಂಡೂರ, ಮಂಜುಳಾ ಅಮರನಾಥ, ಶೋಭಾ ದ್ವಾರಪಾಲಕ, ಸೀಮಾ ಪರಾಂಜಪೆ, ಇತರರು ಇದ್ದರು.