ಜಿಲ್ಲೆ

ಸೋಮೇಶ್ವರಕ್ಕೆ ಬೇಂದ್ರೆ ಸ್ಮರಣೆಯ ಪಾದಯಾತ್ರೆ

ವಿಜಯವಾಣಿ ಸುದ್ದಿಜಾಲ ಧಾರವಾಡ

ಬಂತಣ್ಣ ಸಣ್ಣ ಸೋಮವಾರ, ಕಾಣಬೇಕು ಸೋಮೇಶ್ವರ... ಬೇಂದ್ರೆಯವರು ಶ್ರಾವಣ ಮಾಸದ ಧಾರವಾಡ ಪರಿಸರವನ್ನು ಪ್ರತಿಧ್ವನಿಸುವ ರೀತಿಯಲ್ಲಿ ಈ ಕಾವ್ಯ ಬರೆದಿದ್ದಾರೆ. ಅವರ ಆಶಯದಂತೆ ಶ್ರಾವಣದ ಮೊದಲ ಸೋಮವಾರ ನಗರದ ಬೇಂದ್ರೆ ಅನುಯಾಯಿಗಳ ಬಳಗದಿಂದ ಸಣ್ಣ ಸೋಮವಾರ ಪ್ರಯುಕ್ತ ಶ್ರೀ ಸೋಮೇಶ್ವರ ದೇವಸ್ಥಾನದವರೆಗೆ ಪಾದಯಾತ್ರೆ ನಡೆಸಲಾಯಿತು.

ನಗರದ ಉಳವಿ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ 5ನೇ ವರ್ಷದ ನಡಿಗೆಗೆ ಚಾಲನೆ ನೀಡಲಾಯಿತು. ಅಲ್ಲಿಂದ ಮಾಳಮಡ್ಡಿ, ವೆಂಕಟೇಶ್ವರ ದೇವಸ್ಥಾನ, ಸಾರಸ್ವತಪುರ, ತೇಜಸ್ವಿನಗರ ಮೂಲಕ ಸೋಮೇಶ್ವರ ದೇವಸ್ಥಾನ ತಲುಪಲಾಯಿತು. ಬಳಿಕ ದೇವಸ್ಥಾನದಲ್ಲಿ ಪಾದಯಾತ್ರಿಗಳು ಪೂಜೆ ಸಲ್ಲಿಸಿದರು.

ದೇವಸ್ಥಾನದ ಪ್ರಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕವಿ ರಾಜಕುಮಾರ ಮಡಿವಾಳರ ಮಾತನಾಡಿ, ಉಳವಿ ಬಸವೇಶ್ವರ ದೇವಸ್ಥಾನದ ಮೂಲಕ ಬೇಂದ್ರೆಯವರು ಸೋಮೇಶ್ವರಕ್ಕೆ ಬರುತ್ತಿದ್ದರು. ಅವರು ನಡೆದ ದಾರಿಯಲ್ಲಿ ಪ್ರತಿ ಸಣ್ಣ ಸೋಮವಾರದಂದು ಅವರ ಸ್ಮರಣೆಯಲ್ಲಿ ನಡೆಯಬೇಕು ಎನ್ನುವ ಉದ್ದೇಶದಿಂದ ಪಾದಯಾತ್ರೆ ಆಯೋಜಿಸಿದ್ದೇವೆ. ಮುಂದಿನ ಪೀಳಿಗೆಗೂ ಬೇಂದ್ರೆ ಕಾವ್ಯ ಮತ್ತು ಧಾರವಾಡದ ಹಳೇ ಗತವೈಭವ ತಿಳಿಸುವ ಉದ್ದೇಶ ಹೊಂದಿದ್ದೇವೆ ಎಂದರು.

ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಕವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ. ಸುಧೀ0ದ್ರ ದೇಶಪಾಂಡೆ, ವಿನಾಯಕ ಜೋಶಿ, ಮಂಜುನಾಥ ಹಿರೇಮಠ, ದೇವಪ್ಪ ಅಬ್ಬಿಗೇರ, ಎನ್.ಎನ್. ಪ್ಯಾಟಿ, ಡಿ.ವಿ. ಕಮ್ಮಾರ, ನಾಗೇಶ ಬಡಿಗೇರ, ರಮೇಶ ಉಳ್ಳಾಗಡ್ಡಿ, ಸತೀಶ ಜಾಧವ, ಹೇಮಂತ ರಡ್ಡಿ, ರಾಜೇಂದ್ರ ಮಠ, ಮಾಲತೇಶ, ಇತರರಿದ್ದರು.