ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಸಾಧನಕೇರಿ ಬೇಂದ್ರೆ ಭವನದಲ್ಲಿ ಭಾರತೀಯ ಅಂಚೆ ಇಲಾಖೆ ವತಿಯಿಂದ ವರಕವಿ ಡಾ. ದ.ರಾ. ಬೇಂದ್ರೆ ನಿವಾಸದ ಶಾಶ್ವತ ರೇಖಾಚಿತ್ರ ರದ್ಧತಿ ಅಂಚೆ ಮೊಹರನ್ನು ಬಿಡುಗಡೆಗೊಳಿಸಲಾಯಿತು.
ಬೆಂಗಳೂರಿನ ಕರ್ನಾಟಕ ವೃತ್ತದ ಚೀಫ್ ಪೋಸ್ಟ್ಮಾಸ್ಟರ್ ಜನರಲ್ ರಾಜೇಂದ್ರ ಕುಮಾರ್ ಬಿಡುಗಡೆಗೊಳಿಸಿ ಮಾತನಾಡಿ, ಕರ್ನಾಟಕದ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಂಪರೆ ಗೌರವಿಸುವ ಉದ್ದೇಶದಿಂದ ಭಾರತೀಯ ಅಂಚೆ ಇಲಾಖೆಯು ಶಾಶ್ವತ ರೇಖಾಚಿತ್ರಿತ ರದ್ದತಿ ಮುದ್ರೆಗಳನ್ನು ಬಿಡುಗಡೆಗೊಳಿಸುತ್ತಿದೆ. ಕರ್ನಾಟಕ ವೃತ್ತದಿಂದ ಈವರೆಗೆ 88 ಪ್ರಮುಖ ವ್ಯಕ್ತಿ, ಸ್ಮಾರಕಗಳ ಶಾಶ್ವತ ರೇಖಾಚಿತ್ರಿತ ರದ್ದತಿ ಮುದ್ರೆಗಳನ್ನು ಬಿಡುಗಡೆಗೊಳಿಸಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬಿಡುಗಡೆಗೊಳಿಸಿರುವುದು ದಾಖಲಾರ್ಹವಾದದ್ದು ಎಂದರು.
ಡಾ.ದ.ರಾ.ಬೇಂದ್ರೆ ನಿವಾಸದ ಶಾಶ್ವತ ರೇಖಾಚಿತ್ರಿತ ರದ್ದತಿ ಮುದ್ರೆ ಬಹಳ ವಿರಳ ಮತ್ತು ಅನನ್ಯವಾದದ್ದು. ಇದನ್ನು ಬಿಡುಗಡೆಗೊಳಿಸಿರುವುದು ನಮ್ಮ ಸೌಭಾಗ್ಯ. ಧಾರವಾಡ ವೃತ್ತದಿಂದ ಆದಿಕವಿ ಪಂಪ, ಉಣಕಲ್ ಹಾಗೂ ಡಾ.ದ.ರಾ.ಬೇಂದ್ರೆ ನಿವಾಸದ ರೇಖಾಚಿತ್ರಿತ ರದ್ದತಿ ಮೋಹರುಗಳನ್ನು ಬಿಡುಗಡೆಗೊಳಿಸಲಾಗಿದೆ ಎಂದರು.
ಉತ್ತರ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಕರ್ನಲ್ ಸುಶೀಲ್ಕುಮಾರ್, ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯ ಡಾ.ಡಿ.ಎಂ.ಹಿರೇಮಠ ಮಾತನಾಡಿದರು.
ಬೇಂದ್ರೆ ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸೊಲಗಿ, ಟ್ರಸ್ಟ್ ವ್ಯವಸ್ಥಾಪಕ ಪ್ರಕಾಶ ಬಾಳಿಕಾಯಿ, ಡಾ. ಶಶಿಧರ ನರೇಂದ್ರ, ಸುಕುಮಾರ ನಾಯ್ಕ್, ಪ್ರೊ.ಎನ್.ಆರ್.ಬಾಳಿಕಾಯಿ, ಸುರೇಶ ಗುದಗನವರ, ದೀಪಕ ಆಲೂರ, ಇತರರು ಇದ್ದರು.
ವೈಭವ ವಾಘಮಾರೆ ಸ್ವಾಗತಿಸಿದರು. ಎಸ್. ವಿಜಯನರಸಿಂಹ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ದಲಿಂಗಪ್ಪ ಯಾವಗಲ್ ನಿರೂಪಿಸಿದರು. ಷಣ್ಮುಖ ಶಿರಹಟ್ಟಿ ವಂದಿಸಿದರು.