ಜಿಲ್ಲೆ

ಬೇಂದ್ರೆ’ ಜಗತ್ತಿನ ಬಹುದೊಡ್ಡ ಕವಿ

ಧಾರವಾಡ: ಮಾತೃ ಅಂದರೆ ಜನನಿ, ತಾಯಿಯನ್ನು ಒಂದು ದೈವಿದರ್ಶನದಲ್ಲಿಟ್ಟು ಅದಕ್ಕೊಂದು ಸ್ವರೂಪ, ಸಿದ್ಧಾಂತ ಕೊಟ್ಟಂತಹ ಜಗತ್ತಿನ ಬಹುದೊಡ್ಡ ಕವಿ ಬೇಂದ್ರೆ ಎಂದು ಹಿರಿಯ ಸಾಹಿತಿ ಡಾ.ಕೃಷ್ಣ ಕಟ್ಟಿ ಹೇಳಿದರು.

ಧಾರವಾಡದ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಡಾ.ದ.ರಾ.ಬೇಂದ್ರೆ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ವಿಶೇಷ ಉಪನ್ಯಾಸ, ಸಂಗೀತ ಮತ್ತು ನೃತ್ಯ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿ ಮಾತನಾಡಿದರು. ಬೇಂದ್ರೆ ಅವರ ಕಾವ್ಯದಲ್ಲಿ ಮಾತೃತ್ವ ದರ್ಶನವಿದೆ. ತಾಯಿ, ಅಂಬವ್ವ, ಅವ್ವ ಅಥವಾ ಅಬ್ಬೆ ಅನ್ನುವ ವಸ್ತು-ವಿಷಯ ರೂಪಕದಲ್ಲಿ ಕಟ್ಟಿಕೊಟ್ಟವರು ಬೇಂದ್ರೆ. ಜಗತ್ತಿನ ಸೃಷ್ಟಿಕರ್ತಳು ತಾಯಿ. ಸದಾ ಹೊಸದನ್ನು ಸೃಷ್ಟಿಸುವುದು ಸೀತತ್ವದ ಸಂಕೇತವಾಗಿದೆ. ಸೀ ತತ್ವವನ್ನು ವರಕವಿ ಬೇಂದ್ರೆ ಅವರು ತಮ್ಮ ಕಾವ್ಯದುದ್ದಕ್ಕೂ ಅಭಿವ್ಯಕ್ತಪಡಿಸಿದ್ದಾರೆ ಎಂದರು.

ಟ್ರಸ್ಟ್ ಅಧ್ಯಕ್ಷ ಡಾ.ಸರಜೂ ಕಾಟ್ಕರ್ ಮಾತನಾಡಿ, ನವೋದಯದ ಕವಿಗಳು ತಮ್ಮ ತಾಯಿ ಅವರೊಂದಿಗೆ ಇದ್ದ ಒಲವು, ಗೌರವವನ್ನು ತಮ್ಮ ಕಾವ್ಯಗಳಲ್ಲಿ ಅದ್ಭುತವಾಗಿ ಅಭಿವ್ಯಕ್ತಪಡಿಸಿದ್ದಾರೆ. ಹೊಸಗನ್ನಡದ ಆರಂಭಿಕ ಕವಿಗಳ ಮಹಿಳಾಪರ ಧೋರಣೆಯು ಮುಂಬರುವ ಸಾಹಿತ್ಯ ರಚನೆಗೆ ಮಾರ್ಗ ನಿರ್ಮಾಣ ಮಾಡಿತೆಂದರೆ ತಪ್ಪಾಗಲಾರದು. ಬೇಂದ್ರೆ ಎಂದರೆ ಬೆರಗು ಮತ್ತು ಬೆಳಗು. ದಾರ್ಶನಿಕ ಕವಿ, ಯುಗದ ಕವಿ, ಜಗದ ಕವಿ. ಕರ್ನಾಟಕ ಸರ್ಕಾರವು ‘ಕರ್ನಾಟಕ ರತ್ನ’ ಘೋಷಣೆ ಮಾಡಬೇಕು ಎಂಬುವುದು ನಮ್ಮ ಸಮಿತಿ ಆಶಯವಾಗಿದೆ. ಮುಂಬರುವ ಜನವರಿ 31ರ ಬೇಂದ್ರೆಯವರ ಜನ್ಮದಿನದಂದು ಸರ್ಕಾರ ಘೋಷಣೆ ಮಾಡಬೇಕು ಎಂದು ಒತ್ತಾಯಿಸುತ್ತವೆ ಎಂದರು. ಬೇಂದ್ರೆ ಅವರು ಮರಾಠಿಯಲ್ಲಿ ಬರೆದಿರುವ ಎರಡು ಸಾವಿರಕ್ಕೂ ಹೆಚ್ಚು ಪುಟಗಳಷ್ಟು ಸಾಹಿತ್ಯ ಲಭ್ಯವಿದೆ. ಅದನ್ನು ಕನ್ನಡಕ್ಕೆ ತರುವ ಕೆಲಸ ಮಾಡುವುದು ಬಹಳ ಅವಶ್ಯವಿದೆ ಎಂದರು.

ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಕುಮಾರ ಬೆಕ್ಕೇರಿ, ಸದಸ್ಯರಾದ ಡಾ.ಅಶೋಕ ಶೆಟ್ಟರ್, ಡಾ.ವೈ.ಎಂ.ಯಾಕೊಳ್ಳಿ, ಡಾ.ಶಿಲಾಧರ ಮುಗಳಿ, ಡಾ.ಶರಣಮ್ಮ ಗೊರೇಬಾಳ, ಇಮಾಮಸಾಬ್ ವಲ್ಲೆಪ್ಪನವರ, ಪ್ರಭು ಕುಂದರಗಿ ವೇದಿಕೆಯಲ್ಲಿದ್ದರು.

ನಾದಸುರಭಿ ಸಾಂಸ್ಕೃತಿಕ ಅಕಾಡೆಮಿಯ ಡಾ.ಜ್ಯೋತಿಲಕ್ಷ್ಮೀ ಕೂಡ್ಲಿಗಿ ಮತ್ತು ತಂಡ ಡಾ.ದ.ರಾ.ಬೇಂದ್ರೆಯವರ ಗೀತೆಗಳನ್ನು ಪ್ರಸ್ತುತ ಪಡಿಸಿದರು. ಭರತ ನೃತ್ಯ ಅಕಾಡಮಿಯ ವಿದ್ವಾನ್ ರಾಜೇಂದ್ರ ಟೊಣಪಿ ಮತ್ತು ತಂಡದವರು ಬೇಂದ್ರೆಯವರ ಗೀತೆಗಳಿಗೆ ವೈವಿಧ್ಯಮಯ ನೃತ್ಯ ಪ್ರಸ್ತುತಪಡಿಸಿದರು. ರವಿ ಕುಲಕರ್ಣಿ ನಿರೂಪಿಸಿದರು.