ಬಿಡದಿ: ಪುರಸಭೆ ವ್ಯಾಪ್ತಿಯಲ್ಲಿ 5 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಸೋಮವಾರ ಚಾಲನೆ ನೀಡದರು.
ಬಿಜಿಎಸ್ ವೃತ್ತದಲ್ಲಿ ಪುರಸಭೆಯ ಮುಖ್ಯ ರಸ್ತೆಗೆ ಭೂಮಿ ಪೂಜೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು ನಲ್ಲಿಗುಡ್ಡೆ ಕೆರೆಯನ್ನ ಪ್ರವಾಸಿ ತಾಣ ಮಾಡುವ ನಿಟ್ಟಿನಲ್ಲಿ
10 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಪಾರ್ಕ್, ವಾಕಿಂಗ್ ಪಾಥ್ ನಿರ್ಮಾಣ ಮಾಡಲು ಉದ್ದೇಶಿಸಿಲಾಗಿದೆ ಎಂದರು.
ಪುರಸಭೆ ಕಚೇರೆಗೆ ಸ್ವಂತ ಕಟ್ಟಡ ಇಲ್ಲಾದ ಕಾರಣ ಪುರಸಭೆಯ ನೂತನ ಕಟ್ಟಡ ನಿರ್ಮಾಣಕ್ಕೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ 2 ಕೋಟಿ ರೂ , ಪಟ್ಟಣದಲ್ಲಿ 45 ಕೋಟಿ ವೆಚ್ಚದಲ್ಲಿ ಯುಜಿ ಕೇಬಲ್ ಕಾಮಗಾರಿ ಸೇರಿದಂತೆ 100 ಕೋಟಿ ವೆಚ್ಚದ ಕಾಮಗಾರಿಗಳ ಶಂಕು ಸ್ಥಾಪನೆಗೆ ಯೋಜನೆಗೆ ರೂಪುರೇಷೆ ಸಿದ್ದಪಡಿಸಿಕೊಂಡಿದ್ದು ನವೆಂಬರ್ ತಿಂಗಳಲ್ಲಿ ಸಿಎಂ, ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿಗಳನ್ನು ಕರೆದು ಅವರ ಕೈಯಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ ಎಂದರು.
ರೈತರಿಗೆ ಅನ್ಯಾಯ ಮಾಡಲ್ಲ:
ಬಿಡದಿ ಸ್ಮಾರ್ಟ್ ಸಿಟಿ ವಿಚಾರವಾಗಿ ಬೈರಮಂಗಲ, ಕಂಚುಗಾರನಹಳ್ಳಿ ಗ್ರಾಪಂ ವ್ಯಾಪ್ತಿಗಳಲ್ಲಿಬರುವ ಗ್ರಾಮಗಳ ರೈತರ ಅಭಿಪ್ರಾಯಗಳು ಮತ್ತು ಅನಿಸಿಕೆಗಳ ಮಾಹಿತಿ ಪಡೆದುಕೊಂಡಿದ್ದೇನೆ. ರೈತರ ಆಶಯದಂತೆ ಅವರ ಭೂಮಿಗೆ ಹೆಚ್ಚಿನ ದರ ನಿಗಧಿ ಮಾಡಿ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಕುಮಾರಸ್ವಾಮಿ ಕನಸು ನನಸಾಗುತ್ತದೆ:ಎಚ್.ಡಿ.ಕುಮಾರಸ್ವಾಮಿ ಅವರು ಬಿಡದಿ ಟೌನ್ ಷಿಪ್ ಯೋಜನೆಯನ್ನು ಒಪ್ಪಿಕೊಂಡಿದ್ದಾರೆ. ಬೆಂಗಳೂರು ಪಟ್ಟಣ ವೇಗವಾಗಿ ಬೆಳೆಯುತ್ತಿದೆ. ಬಿಡದಿ ಸ್ಮಾರ್ಟ್ ಸಿಟಿಗೆ ಭೂಮಿ ಕಳೆದುಕೊಂಡ ರೈತರಿಗೆ 40% ಕೊಡಬೇಕು ಎಂದಿದ್ದಾರೆ. ಆದರೆ ರೈತರಿಗೆ ಸೂಕ್ತ ಬೆಲೆ ನೀಡಬೇಕೆಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು
ಕುಮಾರಸ್ವಾಮಿ ಹೇಳಿದ ಬೆಲೆಗಿಂತ 10% ಜಾಸ್ತಿ ಮಾಡಿ, 50% ಕೊಡುತ್ತಿದ್ದಾರೆ. ಆ ಮುಖಾಂತರ ಕುಮಾರಸ್ವಾಮಿ ಅವರ ಕನಸ್ಸನ್ನು ನನಸ್ಸು ಮಾಡುತ್ತೇವೆ ಎಂದು ಟಾಂಗ್ ನೀಡಿದರು.
ಎಚ್.ಡಿ.ಕೆ ಕುಟುಂಬದವರಿಂದ ಬೇನಾಮಿ ಆಸ್ತಿ: ಸ್ಮಾರ್ಟ್ ಸಿಟಿ ನಿರ್ಮಾಣ ಮಾಡುತ್ತೇವೆ ಎಂದು ಮೊದಲು ಇಲ್ಲಿ ಭೂಮಿ ಗುರುತಿಸಿ ರೆಡ್ ಜೋನ್ ಮಾಡಿದ್ದು ಇದೇ ಕುಮಾರಸ್ವಾಮಿ ಅವರು. ಬೇನಾಮಿ ಆಸ್ತಿ ಮಾಡಿರುವವರು ಯಾರು ಎಂದು ಅವರೆ ಒಪ್ಪಿಕೊಂಡಿದ್ದಾರೆ. ಬೇನಾಮಿ ಆಸ್ತಿ ಮಾಡಿರುವವರು ಯಾರೆಂದು ಅವರ ಶ್ರೀಮತಿಯವರು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಬರೆದಿರುವ ಪತ್ರದಿಂದ ಗೊತ್ತಾಗುತ್ತದೆ ಎಂದು ಕುಟುಕಿದರು.