ಜಿಲ್ಲೆ

ಸಾಹಿತಿ ಬೇಲೂರು ಕೃಷ್ಣಮೂರ್ತಿ ಇನ್ನಿಲ್ಲ

arunakunigal

ಹಳೇಬೀಡು: "ಶತನಾಟಕ ಸರದಾರ'' ಎಂದೇ ಖ್ಯಾತರಾಗಿದ್ದ ಸಾಹಿತಿ ಬೇಲೂರು ಕೃಷ್ಣಮೂರ್ತಿ (90) ಮಂಗಳವಾರ ಮುಂಜಾನೆ ಹಾಸನದಲ್ಲಿ ನಿಧನರಾದರು.

ಸಾಹಿತ್ಯ ವಲಯದಲ್ಲಿ ನಾಟಕ ರಚನೆಯ ಮೂಲಕವೇ ಛಾಪು ಮೂಡಿಸಿ, ನೂರಕ್ಕೂ ಅಧಿಕ ನಾಟಕಗಳನ್ನು ರಚಿಸಿ ದಾಖಲೆ ನಿರ್ಮಿಸಿದ್ದರು. ವಿವಿಧ ವಿದ್ಯೆ-ಕಲೆಗಳಲ್ಲಿಯೂ ಪರಿಣತರಾಗಿದ್ದರು. ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿಗಳು ಇವರಿಗೆ ಸಂದಿವೆ. ಬಲಿದಾನ, ಭಂಡಬಾಳು, ಅಸಲಿ ನಕಲಿ, ಆಹುತಿ ಸೇವೆ, ಜ್ವಾಲೆ... ಹೀಗೆ ನೂರಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದ ಬೇಲೂರು ಕೃಷ್ಣಮೂರ್ತಿ ಅವರಿಗೆ ಕನ್ನಡ ಸಾಹಿತ್ಯ ಲೋಕದಲ್ಲಿ ಶತನಾಟಕ ಸಾರ್ವಭೌಮ ಎಂದು ಬಿರುದ್ದು ಬಂದಿತ್ತು. ದಾಹ, ಪುತ್ರವಾತ್ಸಲ್ಯ, ಬೆಟ್ಟದ ಬೈರಾಗಿ.. ಹೀಗೆ ಹತ್ತಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. 'ತೀರದ ಬಯಕೆ' ಸಿನಿಮಾವನ್ನೂ ನಿರ್ದೇಶಿಸಿದ್ದಾರೆ. ಇದನ್ನೂ ಓದಿರಿ ರಿಯಾ ಕೊಟ್ಟ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ?

ಇವರ ಮೊದಲ ಪತ್ನಿಗೆ ಮೂವರು ಮಕ್ಕಳು ಹಾಗೂ ಎರಡನೆಯವರಿಗೆ ಒಬ್ಬ ಪುತ್ರ ಇದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕೃಷ್ಣಮೂರ್ತಿ ಅವರನ್ನು ಇತ್ತೀಚೆಗೆ ಹಾಸನದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕಳೆದ ತಿಂಗಳು 90ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.

ಬೇಲೂರು ಕೃಷ್ಣಮೂರ್ತಿ ಅವರು ಸ್ವ ಇಚ್ಛೆಯಿಂದ ತಮ್ಮ ದೇಹವನ್ನು ಧರ್ಮಸ್ಥಳ ಆಯುರ್ವೇದಿಕ್​ ಆಸ್ಪತ್ರೆಗೆ ಹಲವು ವರ್ಷಗಳ ಹಿಂದೆಯೇ ದಾನ ಮಾಡಿದ್ದರು. ಬೇಲೂರಿನಲ್ಲಿ ಅವರ ಅಂತಿಮ ದರ್ಶನಕ್ಕೆ ಕುಟುಂಬ ವರ್ಗ ವ್ಯವಸ್ಥೆ ಮಾಡಿತ್ತು. ಸಂಜೆ ಧರ್ಮಸ್ಥಳ ಆಯುರ್ವೇದಿಕ್​ ಆಸ್ಪತ್ರೆಗೆ ಪಾರ್ಥಿವ ಶರೀರವನ್ನು ಕುಟುಂಬಸ್ಥರು ಹಸ್ತಾಂತರಿಸಿದರು.