ಬಸ್‌ಗಾಗಿ ರಸ್ತೆ ಬದಿ ಅಂಗಡಿ ಮುಂಭಾಗದಲ್ಲಿ ಕಾಯುತ್ತಿರುವ ಪ್ರಯಾಣಿಕರು 
ಜಿಲ್ಲೆ

ಬೆಳ್ಮಣ್‌ಗೆ ಬೇಕಿದೆ ತಂಗುದಾಣ: ಒದ್ದೆಯಾಗಿ ಬಸ್ ಕಾಯುವ ಸಾರ್ವಜನಿಕರು ;ಸೂಕ್ತ ಕ್ರಮಕ್ಕೆ ಗ್ರಾಮಸ್ಥರ ಒತ್ತಾಯ

ಇಂದಿರಾ ಎನ್ ಕೆ

ಹರಿಪ್ರಸಾದ್ ನಂದಳಿಕೆ ಕಾರ್ಕಳ

ಬೆಳೆಯುತ್ತಿರುವ ಪ್ರಮುಖ ಪೇಟೆ ಪ್ರದೇಶಗಳಲ್ಲಿ ಒಂದಾದ ಬೆಳ್ಮಣ್ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುವ ಪ್ರಯಾಣಿಕರಿಗೆ ಸುಸಜ್ಜಿತ ಹಾಗೂ ಸುರಕ್ಷಿತ ತಂಗುದಾಣದ ಅಗತ್ಯವಿದೆ. ಸರಿಯಾದ ತಂಗುದಾಣ ವ್ಯವಸ್ಥೆಯಿಲ್ಲದೆ ಪ್ರತಿ ನಿತ್ಯ ಮಳೆಯಲ್ಲಿ ಕೊಡೆ ಹಿಡಿದು ಒದ್ದೆಯಾಗುತ್ತ ಬಸ್ ಕಾಯುವುದು ಇಲ್ಲಿ ಮಾಮೂಲು.

ಬೆಳ್ಮಣ್ ಗ್ರಾಪಂ ವ್ಯಾಪ್ತಿಯ ಹೃದಯ ಭಾಗವಾದ ಬೆಳ್ಮಣ್ ಬಸ್ ನಿಲ್ದಾಣದಲ್ಲಿ ಮಂಗಳೂರು ಕಡೆಯತ್ತ ಸಾಗುವಲ್ಲಿ ಒಂದು ತಂಗುದಾಣವಿದೆ. ಇಲ್ಲಿ ಹತ್ತು ಮಂದಿ ಸೇರುವಾಗಲೇ ತಂಗುದಾಣ ತುಂಬಿ ಹೋಗುತ್ತದೆ. ಉಳಿದಂತೆ ಎಲ್ಲ ಪ್ರಯಾಣಿಕರು ಮಳೆ ಬಿಸಿಲಿಗೆ ಹೊರಗೆ ನಿಂತು ಬಸ್ ಕಾಯುವುದು ಅನಿವಾರ್ಯ. ಅಲ್ಲದೆ ವಿರುದ್ಧ ದಿಕ್ಕಿನಲ್ಲಿ ಕಾರ್ಕಳ ಹಾಗೂ ಉಡುಪಿ ಕಡೆಯತ್ತ ಬಸ್ ಕಾಯುವ ಮಂದಿ ನಿತ್ಯ ಗಂಟೆಗಟ್ಟಲೆ ಮಳೆಯಲ್ಲಿ ನೆನೆದು ಕಾಯುವಂತಾಗಿದೆ.

ಅಂಗಡಿಗಳೇ ಆಶ್ರಯ

ನಿತ್ಯ ನಿಟ್ಟೆ, ಉಡುಪಿ, ಶಿರ್ವ, ಕಾರ್ಕಳ ಹಾಗೂ ಮಂಗಳೂರು ಭಾಗದ ಕಾಲೇಜುಗಳಿಗೆ ವಿದ್ಯಾಭ್ಯಾಸಕ್ಕೆ ತೆರಳುವ ವಿದ್ಯಾರ್ಥಿಗಳು ಹಾಗೂ ಕೆಲಸ ಕಾರ್ಯಕ್ಕೆ ತೆರಳುವ ಮಂದಿ ರಸ್ತೆ ಬದಿ ಬಸ್‌ಗಾಗಿ ಕಾಯುವಂತಾಗಿದೆ. ಕೆಲ ಸಂದರ್ಭದಲ್ಲಿ ಜೋರಾಗಿ ಬೀಸುವ ಗಾಳಿ ಸಹಿತ ಮಳೆಯಿಂದ ರಕ್ಷಿಸಿಕೊಳ್ಳಲು ಸಮೀಪದಲ್ಲಿರುವ ಅಂಗಡಿಗಳ ಆಶ್ರಯ ಪಡೆಯುವಂತಾಗಿದೆ.

ಪಾಳು ಬಿದ್ದ ಖಾಲಿಜಾಗ

ಬೆಳ್ಮಣ್ ಬಸ್ ನಿಲ್ದಾಣ ಕಟ್ಟಡಕ್ಕೆ ತಾಗಿಕೊಂಡೆ ಹೆದ್ದಾರಿ ಬದಿಯಲ್ಲಿ ಖಾಲಿ ಜಾಗವಿದ್ದರೂ ಇದಕ್ಕೆ ಉಪಯೋಗಿಸುವಲ್ಲಿ ಸ್ಥಳೀಯ ಪಂಚಾಯಿತಿ ಮನಸ್ಸು ಮಾಡುತ್ತಿಲ್ಲ. ಈ ಹಿಂದೆ ರಾಜ್ಯ ಹೆದ್ದಾರಿ 1ರ ಅಗಲೀಕರಣ ಸಂದರ್ಭ ಹಳೇ ಪಂಚಾಯಿತಿ ಮೀನು ಮಾರುಕಟ್ಟೆ ಕಟ್ಟಡವನ್ನು ಸಂಪೂರ್ಣ ಕೆಡವಿ ಹಾಕಲಾಗಿದ್ದು, ಆ ಬಳಿಕ ಕಟ್ಟಡ ನಿರ್ಮಾಣಕ್ಕೆ ಕಾನೂನು ತೊಡಕು ಉಂಟಾಗಿ ಹೆದ್ದಾರಿ ಬದಿ ಸುಂದರ ಜಾಗ ಖಾಲಿ ಬೀಳುವಂತಾಯಿತು. ಇದೀಗ ಈ ಖಾಲಿ ಜಾಗವನ್ನೇ ಒಂದೋ ಪ್ರಯಾಣಿಕರ ತಂಗುದಾಣ, ಇಲ್ಲವೇ ಕಾರು ಹಾಗೂ ಆಟೋ ರಿಕ್ಷಾ ನಿಲ್ದಾಣವಾಗಿ ನಿರ್ಮಾಣ ಮಾಡಲು ಅವಕಾಶಗಳಿದ್ದು ಇದರ ಪ್ರಯೋಜನ ಸ್ಥಳೀಯಾಡಳಿತ ಪಡೆದುಕೊಳ್ಳಬೇಕಾಗಿದೆ ಎನ್ನುವುದು ಪ್ರಯಾಣಿಕರ ಒತ್ತಾಯ.

ಪ್ರಯಾಣಿಕರಿಗೆ ಅನುಕೂಲ

ಉಡುಪಿ ತಿರುವ ರಸ್ತೆ ಪಕ್ಕದಲ್ಲೇ ಬಸ್ ಪ್ರಯಾಣಿಕರು ಹತ್ತಿ ಇಳಿಸುತ್ತಿದ್ದು, ಹೀಗಾಗಿ ಸ್ವಲ್ಪ ಹಿಂದಕ್ಕೆ ಸುಂದರ ತಂಗುದಾಣ ನಿರ್ಮಾಣವಾದಲ್ಲಿ ಬೆಳ್ಮಣ್‌ನಲ್ಲಿ ಪದೇ ಪದೆ ನಡೆಯುತ್ತಿರುವ ಅಪಘಾತಗಳ ಸರಮಾಲೆ ತಪ್ಪಿಸಲು ಸಾಧ್ಯತೆಯಿದೆ. ಖಾಲಿ ಜಾಗವನ್ನು ಸರಿಯಾಗಿ ಉಪಯೋಗಿಸಿಕೊಂಡಲ್ಲಿ ಬೆಳ್ಮಣ್ ಪೇಟೆ ಪ್ರದೇಶವೂ ಸುಂದರವಾಗಿ ಬೆಳೆದರೇ ಇತ್ತ ಪ್ರಯಾಣಿಕರಿಗೂ ಹೆಚ್ಚಿನ ಅನುಕೂಲವಾಗಲಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

ಬೆಳ್ಮಣ್ ಪೇಟೆ ಪ್ರಮುಖ ಜಂಕ್ಷನ್ ಪ್ರದೇಶವಾಗಿದ್ದು, ಇಲ್ಲಿಗೆ ನಿತ್ಯ ನೂರಾರು ಮಂದಿ ಪ್ರಯಾಣಿಕರು ಬರುತ್ತಾರೆ. ಹೀಗಾಗಿ ಕಾರ್ಕಳ ಕಡೆಯತ್ತ ಸಾಗುವ ಪ್ರಯಾಣಿಕರಿಗಾಗಿ ಇಲ್ಲಿಗೊಂದು ಸುಂದರ ತಂಗುದಾಣದ ಅಗತ್ಯವಿದೆ.-ಸಂತೋಷ್, ಗ್ರಾಮಸ್ಥರು
ನಾನು ನಿತ್ಯ ಕಾಲೇಜಿಗೆ ತೆರಳಲು ರಸ್ತೆ ಬದಿಯಲ್ಲಿ ಅಂಗಡಿ ಮುಂಭಾಗದಲ್ಲಿ ನಿಂತು ಮಳೆಯಲ್ಲೇ ಒದ್ದೆಯಾಗಿ ಬಸ್ ಕಾಯಬೇಕಾಗಿದೆ. ಕಾರ್ಕಳ ಹಾಗೂ ಉಡುಪಿ ಕಡೆಯತ್ತ ಪ್ರಯಾಣ ಬೆಳೆಸುವ ಪ್ರಯಾಣಿಕರ ಕಷ್ಟ ಅರಿತು ಇಲ್ಲೊಂದು ತಂಗುದಾಣ ನಿರ್ಮಾಣವಾಗಬೇಕಾಗಿದೆ.-ಪ್ರಣವಿ, ವಿದ್ಯಾರ್ಥಿನಿ