ಮಡಿಕೇರಿ: ದಕ್ಷಿಣ ಕೊಡಗಿನ ಜನರಿಗೆ ಕಂಟಕವಾಗಿ ಕಾಡುತ್ತಿರುವ ನರಭಕ್ಷಕ ಹುಲಿ ಹತ್ಯೆ ಮಾಡುವಂತೆ ಸಾರ್ವಜನಿಕರು ಸಾಮೂಹಿಕವಾಗಿ ಆಗ್ರಹಿಸುತ್ತಿದ್ದಾರೆ. ಹುಲಿ ಸಮಸ್ಯೆ ಬಗ್ಗೆ ಜನಾಕ್ರೋಶ ಹೆಚ್ಚಾಗುತ್ತಿದ್ದಂತೆ ವಿಧಾನಮಂಡಲ ಅಧಿವೇಶನದಲ್ಲಿದ್ದ ಜಿಲ್ಲೆಯ ಜನಪ್ರತಿನಿಧಿಗಳು ಓಡೋಡಿ ಬೆಳ್ಳೂರಿನಲ್ಲಿ ಪ್ರತಿಭಟನೆ ನಡೆಯುತ್ತಿರುವ ಸ್ಥಳಕ್ಕೆ ಗುರುವಾರ ಆಗಮಿಸಿದರು.
ವಿಧಾನಮಂಡಲ ಅಧಿವೇಶನದಲ್ಲಿ ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ, ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ವಿಧಾನಮಂಡಲ ಅಧಿವೇಶನದಲ್ಲಿ ಹುಲಿ ಸಮಸ್ಯೆ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದರು. ಹುಲಿ ಸೆರೆ ಅಥವಾ ಗುಂಡಿಕ್ಕಲು ಅನುಮತಿ ನೀಡಲಾಗಿದೆ ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಘೋಷಿಸಿದ್ದರು.
ನರಹಂತಕ ಹುಲಿ ಹತ್ಯೆಗೆ ಆಗ್ರಹಿಸಿ 4ನೇ ದಿನವಾದ ಗುರುವಾರ ಬೆಳ್ಳೂರಿನಲ್ಲಿ ಪ್ರತಿಘಭಟನೆ ನಡೆಯುತ್ತಿತ್ತು. ಸ್ಥಳಕ್ಕೆ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್, ವೀಣಾ ಅಚ್ಚಯ್ಯ ಆಗಮಿಸಿ, ಜನರ ಹೋರಾಟಕ್ಕೆ ಬೆಂಬಲ ಘೋಷಿಸಿದ್ದರು. ನಿಮ್ಮೊಂದಿಗೆ ನಾವಿದ್ದೇವೆ ಎಂಬ ಅಭಯ ನೀಡಿದರು. ಸರ್ಕಾರದ ಆದೇಶದಂತೆ ನರಭಕ್ಷಕ ಹುಲಿಗೆ ತಕ್ಷಣ ಗುಂಡಿಕ್ಕಿ ಕೊಲ್ಲುವಂತೆ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗುವುದೆಂದು ಅಭಯ ನೀಡಿದರು.