ಜಿಲ್ಲೆ

ಯೋಗದಿಂದ ದೈಹಿಕ,ಮಾನಸಿಕ ಸದೃಢ

ಬಳ್ಳಾರಿ : ಪ್ರತಿಯೊಬ್ಬರು ನಿತ್ಯ ಯೋಗದಲ್ಲಿ ತೊಡಗುವುದರಿಂದ ದೈಹಿಕ ಹಾಗೂ ಮಾನಸಿಕ ಸದೃಢವಾಗಲಿದ್ದಾರೆ ಎಂದು ಲಿಡ್ಕರ್ ಅಧ್ಯಕ್ಷ ಮುಂಡ್ರಗಿ ನಾಗರಾಜ ಹೇಳಿದರು.

ನಗರದ ಶೆಟ್ಟರ ಗುರುಶಾಂತಪ್ಪ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಕೇಂದ್ರ ಆಯುಷ್ ಮಂತ್ರಾಲಯ, ರಾಷ್ಟ್ರೀಯ ಆಯುಷ್ ಅಭಿಯಾನ, ಆಯುಷ್ ಇಲಾಖೆ, ಜಿಲ್ಲಾಡಳಿತ, ಜಿಪಂ ಹಾಗೂ ಸಮಸ್ತ ಯೋಗ ಸಂಸ್ಥೆಗಳ ಸಹಯೋಗದೊಂದಿಗೆ ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ ಎಂಬ ಘೋಷವಾಕ್ಯದೊಂದಿಗೆ ಶನಿವಾರ ಆಯೋಜಿಸಿದ್ದ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಯೋಗಾಸನಗಳ ಅಭ್ಯಾಸ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಪ್ರತಿದಿನ ಯೋಗಾಭ್ಯಾಸ ಮಾಡುವುದು, ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು. ಯೋಗವು ಹಲವಾರು ರೋಗಗಳನ್ನು ನಮ್ಮತ್ತ ಸುಳಿಯದಂತೆ ನೋಡಿಕೊಳ್ಳುತ್ತದೆ. ಯೋಗವು ಭಾರತೀಯ ಸಂಸ್ಕೃತಿಯಲ್ಲಿ ಒಂದು ಪುರಾತನ ಅಭ್ಯಾಸವಾಗಿದೆ ಎಂದರು.

ಜಿಲ್ಲಾ ಸಂಯೋಜಕ ಇಸ್ವಿ ಪಂಪಾಪತಿ ಅವರು ಧ್ವನಿ ಸುರುಳಿಯ ಮೂಲಕ ವಿವಿಧ ಆಸನಗಳ ಮಹತ್ವ ತಿಳಿಸುತ್ತಾ, ಯೋಗಾಸಕ್ತರಿಗೆ ನಿಯಮಾನುಸಾರ ಯೋಗಾಸನಗಳನ್ನು 45 ನಿಮಿಷಗಳವರೆಗೆ ಯೋಗಭ್ಯಾಸ ನಡೆಸಿಕೊಟ್ಟರು.

ಇದೇ ವೇಳೆ ಕುರೆಕುಪ್ಪ ಎಸ್.ಆರ್.ಕೆ. ಯೋಗ ಸಂಸ್ಥೆಯ ಮಕ್ಕಳಿಂದ ವಿಶೇಷ ಯೋಗ ಪ್ರದರ್ಶನ ಹಾಗೂ 21 ಯೋಗ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಯೋಗಭ್ಯಾಸದಲ್ಲಿ ನಿರತವರಿಗೆ ಕ್ಯೂಆರ್ ಕೋಡ್ ಮೂಲಕ ನೋಂದಯಿಸಿಕೊಂಡು ಭಾಗವಹಿಸಿದ ಪ್ರಮಾಣ ಪತ್ರ ಪಡೆದುಕೊಳ್ಳಬಹುದಾಗಿತ್ತು.

ಕಾರ್ಯಕ್ರಮದಲ್ಲಿ ವಿವಿಧ ಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಗೂ ಯೋಗಾಸಕ್ತರು ಸಾಮೂಹಿಕ ಯೋಗಾಭ್ಯಾಸದಲ್ಲಿ ಆಸಕ್ತಿಯಿಂದ ಭಾಗವಹಿಸಿದ್ದು ವಿಶೇಷವಾಗಿತ್ತು. ಯೋಗಾಭ್ಯಾಸದಲ್ಲಿ ಭಾಗವಹಿಸಿದ ಯೋಗಾಸಕ್ತರಿಗೆ ಟಿ-ಶರ್ಟ್, ಕ್ಯಾಪ್ ಮತ್ತು ಔಷಧ ಸಸಿಗಳನ್ನು ವಿತರಿಸಲಾಯಿತು.