ಜಿಲ್ಲೆ

ಮಹಿಳೆಯರಿಗೆ ಶಿಕ್ಷಣ ಅಗತ್ಯ

ಬಳ್ಳಾರಿ ; ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣ ಅಗತ್ಯವಿದೆ. ಅವರಲ್ಲಿ ಆತ್ಮವಿಶ್ವಾಸ ಮತ್ತು ಸಬಲೀಕರಣ ಹೆಚ್ಚಿಸುವುದು ಪಾಲಕರ ಜವಾಬ್ದಾರಿಯಾಗಿದೆ ಎಂದು ಎಸ್ಪಿ ಡಾ.ವಿ.ಜೆ.ಶೋಭಾರಾಣಿ ಹೇಳಿದರು.

ನಗರದ ಬಿಡಿಎಎ ಸಭಾಂಗಣದಲ್ಲಿ ರೀಡ್ಸ್ ಸಂಸ್ಥೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಕ್ಕಳ ವಿಶೇಷ ಪೋಲಿಸ್ ಘಟಕ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಹಯೋಗದೊಂದಿಗೆ ಬಾಲ್ಯವಿವಾಹ ನಿಷೇಧ, ಲಿಂಗ ತಾರತಮ್ಯ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ತಡೆ ಕುರಿತು ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಹದಿಹರೆಯದ ಹೆಣ್ಣು ಮಕ್ಕಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಹೆಣ್ಣುಮಕ್ಕಳ ಆರೋಗ್ಯಕರ ಜೀವನಶೈಲಿ, ಶಿಕ್ಷಣ ಮತ್ತು ಪೋಷಣೆ ಬಗ್ಗೆ ಪಾಲಕರು ಕಾಳಜಿ ವಹಿಸಬೇಕು. ತಮ್ಮ ಗುರಿ ತಲುಪಲು ಸಹಾಯ ಮಾಡಬೇಕು. ಶ್ರದ್ಧೆ ಮತ್ತು ನಿಷ್ಠೆಯಿಂದ ವಿದ್ಯಾಭ್ಯಾಸ ಮಾಡಿದರೆ ಕನಸು ಕಂಡ ಗುರಿಯನ್ನು ತಲುಪಬಹುದು ಎಂದು ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್.ಹೊಸಮನಿ ಮಾತನಾಡಿ, ವಿದ್ಯಾರ್ಥಿ ಜೀವನವು ಅತ್ಯಂತ ಅಮೂಲ್ಯವಾದದ್ದು. ಯಾವುದೇ ಸಮಯವನ್ನು ವ್ಯರ್ಥ ಮಾಡದೇ ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಸಮಾಜದಲ್ಲಿ ಉತ್ತಮ ಸ್ಥಾನ ಪಡೆದು ಗೌರವದಿಂದ ಬದುಕಬೇಕು. ಬಾಲ್ಯವಿವಾಹ ಮತ್ತ ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆಗೊಳಿಸಿ ಸುಂದರವಾದ ಸಮಾಜ ನಿರ್ಮಾಣ ಮಾಡಲು ನಾವೆಲ್ಲರೂ ಕೈಜೋಡಿಸಬೇಕು ಎಂದರು.

ಬಳಿಕ ಬಾಲ್ಯವಿವಾಹದ ಕುರಿತು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮಕ್ಕೂ ಮುನ್ನ ಬಾಲ್ಯವಿವಾಹ ನಿಷೇಧ, ಲಿಂಗ ತಾರತಮ್ಯ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ತಡೆ ಕುರಿತು ನಗರದಲ್ಲಿ ಆಕರ್ಷಕ ಜಾಥಾ ನಡೆಯಿತು. ಬಾಲ್ಯವಿವಾಹ ಮತ್ತು ಶಿಕ್ಷಣದ ಬಗ್ಗೆ ಕುರಿತ ವಿವಿಧ ಫಲಕಗಳನ್ನು ಹಿಡಿದ ವಿದ್ಯಾರ್ಥಿಗಳು ಗಮನ ಸೆಳೆದರು.