ಬಳ್ಳಾರಿ : ಅಮ್ಮ ಅಂತ ಏಕೆ ಅಂತಿಯಾ, ಮೇಡಂ ಎಂದು ಕರೆಯುವುದಕ್ಕೆ ಮೈಯಲ್ಲಿ ಏನು ಕೊಬ್ಬ ಎಂದು ಎಸ್ಪಿ ಡಾ.ವಿ.ಜೆ.ಶೋಭಾರಾಣಿ ರೌಡಿ ಶೀಟರ್‌ಗೆ ಎಚ್ಚರಿಸಿದರು.
ನಗರದ ಡಿಎಆರ್ ಪೊಲೀಸ್ ಮೈದಾನದಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯ ರೌಡಿ ಶೀಟರ್‌ಗಳ ಪರೇಡ್‌ನಲ್ಲಿ ಮಾತನಾಡಿದರು. ಕೊಲೆ ಮಾಡಿ ಕೇಸ್ ಖುಲಾಸೆ ಮಾಡಿಕೊಂಡರೆ ನೀವೆಲ್ಲ ದೊಡ್ಡವರ ಎಂದು ರೌಡಿಗಳನ್ನು ಪ್ರಶ್ನಿಸಿದರು. ಜಿಲ್ಲೆಯ ಎಲ್ಲ ರೌಡಿ ಶೀಟರ್‌ಗಳ ವೃತ್ತಿಗಳ ಬಗ್ಗೆ ಅನುಮಾನವಿದ್ದು, ಸಂಬಂಧಪಟ್ಟ ಠಾಣಾಧಿಕಾರಿಗಳು ಮತ್ತೋಮ್ಮೆ ಸದ್ಯ ರೌಡಿ ಶೀಟರ್‌ಗಳ ವೃತ್ತಿ ಚಟುವಟಿಕೆಗಳನ್ನು ಪರಿಶೀಲಿಸಿ ಮಾಹಿತಿ ಒದಗಿಸಬೇಕು. ಅಲ್ಲದೆ, ಜಿಲ್ಲೆಯ ಬಹುತೇಕ ರೌಡಿ ಶೀಟರ್‌ಗಳು ಆಟೋ ಡ್ರೈವರ್, ಪೇಟಿಂಗ್ ಕೆಲಸ, ಕೂಲಿ ಕಾರ್ಮಿಕರು ಎಂದು ಹೇಳುತ್ತಿದ್ದಾರೆ. ಆದ್ದರಿಂದ, ಇಂತಹವರ ಮೇಲೆ ಸದಾ ನಿಗಾವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅಕ್ರಮ ಗಾಂಜಾ ಸೇವನೆ, ಮಟ್ಕಾ, ಜೂಜಾಟ, ಕೋಮು ಗಲಭೆ ಹಾಗೂ ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಇರಬೇಕು. ಯಾವುದಾದರೂ ಪ್ರಕರಣದಲ್ಲಿ ಬಂಧನವಾದರೆ ಅವರಿಗೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ರೌಡಿ ಶೀಟರ್‌ಗಳಿಗೆ ಎಸ್ಪಿ ಖಡಕ್ ವಾರ್ನಿಂಗ್ ನೀಡಿದರು.
ಹಿರಿಯರ ಮೇಲೆ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಗ್ರಾಮಗಳಲ್ಲಿ ಕೋಮುಗಲಭೆ ಅಂತಹ ಪ್ರಕರಣಗಳಿಗೆ ಪ್ರಚೋದನೆ ನೀಡಬಾರದು. ಹಳ್ಳಿಗಳಲ್ಲಿನ ಯುವಕರಿಗೆ ಗ್ರಾಮದ ಹಿರಿಯರು ಎನಿಸಿಕೊಂಡವರು ಬುದ್ಧಿ ಹೇಳಿ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ತಿಳಿಸಿದರು.
ಜಿಲ್ಲೆಯ 17 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 400ಕ್ಕೂ ಹೆಚ್ಚು ರೌಡಿ ಶೀಟರ್‌ಗಳು ಪರೇಡ್‌ಗೆ ಹಾಜರಿದ್ದರು. ಇದರಲ್ಲಿ 67 ರೌಡಿ ಶೀಟರ್‌ಗಳು ಸಕ್ರಿಯರಾಗಿದ್ದಾರೆಂದು ತಿಳಿದು ಬಂದಿದೆ. ಪರೇಡ್‌ಗೆ ಭಾಗಿಯಾಗದ ಆರೋಪಿಗಳನ್ನು ಠಾಣೆಗೆ ಕರೆಸಿ ವಾರ್ನಿಂಗ್ ನೀಡಲು ಎಸ್ಪಿ ಆದೇಶಿಸಿದರು.