ಬಳ್ಳಾರಿ: ಸದಾ ಒಂದಿಲ್ಲೊಂದು ಶೈಕ್ಷಣಿಕ ವಿಷಯಕ್ಕೆ ಮುಂದುವರಿಯುವ ವಿಎಸ್‌ಕೆವಿವಿ ಈ ಬಾರಿ ತನ್ನ ಅಧೀನದಲ್ಲಿರುವ ಅಥಿತಿಗೃಹದಲ್ಲಿ 50 ಹಾಸಿಗೆಗಳ ಉಚಿತ ಕೋವಿಡ್ ಕೇರ್ ಐಸೋಲೇಶನ್ ಕೇಂದ್ರ ಪ್ರಾರಂಭಿಸಿದ್ದು, ರಾಜ್ಯದಲ್ಲೇ ವಿವಿ ಇದು ಪ್ರಥಮ ಪ್ರಯತ್ನವಾಗಿದೆ.
ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿವಿ ಕುಲಪತಿ ಪ್ರೊ.ಸಿದ್ದು ಪಿ.ಅಲಗೂರು, ಜೈನ್ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್ ಮತ್ತು ಸೇವಾ ಭಾರತಿ ಸಹಯೋಗದಲ್ಲಿ ಬಡವರು ಮತ್ತು ಮಧ್ಯಮ ವರ್ಗದ ಕೋವಿಡ್ ರೋಗಿಗಳಿಗೆ ಐಸೋಲೇಶನ್ ಮತ್ತು ಕೋವಿಡ್ ಚಿಕಿತ್ಸೆ ನೀಡುವ ಉದ್ದೇಶದಿಂದ ವಿಎಸ್‌ಕೆವಿವಿಯ ಅತಿಥಿ ಗೃಹದಲ್ಲಿ 50 ಹಾಸಿಗೆಗಳ ಕೋವಿಡ್ ಕೇರ್ ಐಸೋಲೇಶನ್ ಕೇಂದ್ರ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.
ಮನೆಯಲ್ಲಿ ಸೂಕ್ತ ರೀತಿಯಾಗಿ ಐಸೋಲೇಶನ್‌ನಲ್ಲಿ ಇರಲು ಸಾಧ್ಯವಾಗದಂತ ಕೋವಿಡ್ ರೋಗಿಗಳಿಗೆ ಐಸೋಲೇಶನ್ ಕೇಂದ್ರ ನೆರವಾಗಲಿದೆ. ಇಲ್ಲಿ ಸಂಪೂರ್ಣವಾಗಿ ಮನೆಯ ವಾತಾವರಣ ನಿರ್ಮಾಣ ಮಾಡಲಾಗುತ್ತದೆ. ಯಾವುದೇ ರೀತಿಯ ಆಕ್ಸಿಜನ್, ವೆಂಟಿಲೇಟರ್, ಐಸಿಯು ಹಾಸಿಗೆ ಇರುವುದಿಲ್ಲ. ಇದು ಕೇವಲ ಐಸೋಲೇಶನ್ ಕೇಂದ್ರವಷ್ಟೇ ಎಂದು ಮಾಹಿತಿ ನೀಡಿದರು. ಹಾಗೂ ಕರೊನಾ ಪಾಸಿಟಿವ್ ಆಗಿರುವ ವ್ಯಕ್ತಿಗಳು ಜಿಲ್ಲಾಡಳಿತ ಸೂಚನೆ ಮೇರಿಗೆ ಇಲ್ಲಿ ಐಸೋಲೇಟ್ ಆಗಬಹುದು ಎಂದರು.
ಐಸೋಲೇಶನ್ ಕೇಂದ್ರದಲ್ಲಿರುವ ಕೋವಿಡ್ ರೋಗಿಗಳಿಗೆ ಆರೋಗ್ಯದಲ್ಲಿ ಏರುಪೇರಾದರೆ ಜಿಲ್ಲಾಡಳಿತದ ಗಮನಕ್ಕೆ ತಂದು ಅವರ ಸೂಚನೆಯಂತೆ ಸೂಕ್ತ ಚಿಕಿತ್ಸೆ ಲಭ್ಯವಿರುವ ಆಸ್ಪತ್ರೆಗೆ ಅವರನ್ನು ಸೇರಿಸುವ ಕೆಲಸ ಮಾಡಲಾಗುವುದು. ಐಸೋಲೇಶನ್ ಕೇಂದ್ರದಲ್ಲಿ ಎಲ್ಲಾ ರೀತಿಯ ಚಿಕಿತ್ಸೆ, ಔಷಧ ನೀಡುವ ಜತೆಗೆ ಸರ್ಕಾರದ ಮಾರ್ಗಸೂಚಿಯಂತೆ ಕೋವಿಡ್ ರೋಗಿಗಳಿಗೆ ಆಹಾರ ಪೂರೈಸಲಾಗುತ್ತದೆ.
ಕೋವಿಡ್ ಪಾಸಿಟಿವ್ ವರದಿಯ ಜತೆಗೆ ವೈದ್ಯರ ಸೂಚನೆಯ ಮೇರೆಗೆ ಐಸೋಲೇಶನ್ ನಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಇಲ್ಲಿ ನುರಿತ ವೈದ್ಯರ ಜತೆಗೆ ಕೋವಿಡ್ ವಾರಿಯರ್‌ಗಳಾಗಿ ಕಾರ್ಯನಿರ್ವಹಿಸುತ್ತಿರುವ ನರ್ಸ್‌ಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.
ಜೈನ್ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್(ಜೀತೋ) ಅಧ್ಯಕ್ಷ ಸಿ.ಎ.ವಿನೋದ್ ಬಗ್ರಿಚಾ, ಮುಖ್ಯ ಕಾರ್ಯದರ್ಶಿ ವಿಮಲ್ ಜೈನ್, ಸಿಸಿಬಿ ಮಹಾವೀರ್ ಭೂರತ್, ಬೋರ್ಡ್ ಮೆಂಬರ್ ಕೈಲಾಸ್ ಜೈನ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಂಟಿ ಕಾರ್ಯದರ್ಶಿ ಪ್ರಸನ್ನಾಜಿ ಸೇರಿದಂತೆ ಮುಖಂಡರಾದ ಸತೀಶ್ ಕುಮಾರ್, ನರೇಶ್ ಚಿನರಾಯಿ, ಡಾ.ವಿಜಯ್ ಭಾಸ್ಕರ್ ರೆಡ್ಡಿ, ರಾಘವೇಂದ್ರ ಇದ್ದರು.
ಉತ್ತಮ ಪುಸ್ತಕ ಓದು
ರೋಗಿಗಳು ಮಾನಸಿಕ ಮತ್ತು ದೈಹಿಕವಾಗಿ ಶೀಘ್ರದಲ್ಲಿ ಚೇತರಿಸಿಕೊಳ್ಳುವ ನಿಮಿತ್ತ ಉತ್ತಮ ಪುಸ್ತಕಗಳನ್ನು ಮತ್ತು ಶಿಕ್ಷಣ, ಸೃಜನಶೀಲ ವಿಡಿಯೋಗಳನ್ನು ತೋರಿಸುವ ಮೂಲಕ ಕೋವಿಡ್ ರೋಗಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡಲಾಗುತ್ತದೆ. ಕೋವಿಡ್ ಕೇರ್ ಐಸೋಲೇಶನ್ ಕೇಂದ್ರಕ್ಕೆ ನೋಡೆಲ್ ಮತ್ತು ಸಹಾಯಕ ನೋಡೆಲ್ ಅಧಿಕಾರಿಗಳಾಗಿ ವಿವಿಯ ಸಿಬ್ಬಂದಿಯನ್ನು ನೇಮಿಸಲಾಗಿದ್ದು, ಒಂದು ಅಂಬುಲೆನ್ಸ್ ಇರುತ್ತದೆ.