ಬಳ್ಳಾರಿ: ವಿಜ್ಞಾನ ಕ್ಷೇತ್ರದಲ್ಲಿ ಭಾರತವು ಅಸಾಧಾರಣ ಸಾಧನೆ ಮಾಡಿದೆ ಎಂದು ವೀ.ವಿ.ಸಂಘದ ಸಹ ಕಾರ್ಯದರ್ಶಿ ದರೂರು ಶಾಂತನಗೌಡ ಹೇಳಿದರು.
ನಗರದ ವೀರಶೈವ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಜ್ಞಾನದಲ್ಲಾದ ಆವಿಷ್ಕಾರದ ಸದುಪಯೋಗವನ್ನು ಎಲ್ಲರೂ ಮಾನವ ಕಲ್ಯಾಣಕ್ಕಾಗಿ ಬಳಸಬೇಕೇ ಹೊರತು ವಿನಾಶಕ್ಕಲ್ಲ. ಮುಂದಿನ ದಿನಗಳಲ್ಲಿ ಯುವ ವಿಜ್ಞಾನಿಗಳಾಗಿ ಹೊರಹೂಮ್ಮುವವರು ಇದನ್ನು ಗಮನದಲ್ಲಿಟ್ಟುಕೊಂಡು ಸಾಧನೆ ಮಾಡಬೇಕು ಎಂದರು.
ಖ್ಯಾತ ವನ್ಯಜೀವಿ ತಜ್ಞ ಎಚ್.ಪನಮೇಶ ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ ಅನೇಕ ವಿಧವಾದ ಪ್ರಾಣಿ, ಪಕ್ಷಿಗಳು, ಸಸ್ಯಗಳು ಹೇರಳವಾಗಿವೆ. ಅಲ್ಲದೆ, ವಿಶೇಷ ಜೈವಿಕ ವೈವಿಧ್ಯತೆಯನ್ನು ಸಹ ಕಾಣಬಹುದಾಗಿದೆ. ಬಳ್ಳಾರಿ ಬರಿ ಬಿಸಿಲನಾಡಲ್ಲ ಮತ್ತು ಖನಿಜ ಒಂದೇ ಇಲ್ಲಿನ ನೈಸರ್ಗಿಕ ಸಂಪತ್ತಲ್ಲ. ಇದು ಅನೇಕ ಜೀವಿಗಳ ನೈಸರ್ಗಿಕ ತಾಣವಾಗಿದೆ. ಇವುಗಳನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಮತ್ತು ಜಾಗರೂಕತೆಯಿಂದ ಮುಂದಿನ ಪೀಳಿಗೆಗೆ ರಕ್ಷಣೆ ಮಾಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದರು. ಪ್ರಾಧ್ಯಾಪಕರಾದ ಎ.ಶರ‌್ಲಿಜೋನ್ಸ್, ಡಿ.ನಾಗೇಶ ಶಾಸ್ತ್ರಿ, ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.