ಬಳ್ಳಾರಿ ಡಿಸಿ ಕಚೇರಿ ಅವರಣದಲ್ಲಿ ಪ್ರತಿಭಟನೆ ನಡೆಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಪದಾಧಿಕಾರಿಗಳು ಷರತ್ತು ರಹಿತ ಖರೀದಿ ಕೇಂದ್ರಗಳನ್ನು ಸ್ಥಾಪಿಸಿ, ನಿರಂತವಾಗಿ ಕಾರ್ಯ ನಿರ್ವಹಿಸುವಂತೆ ಒತ್ತಾಯಿಸಿದರು. 
ಜಿಲ್ಲೆ

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ, ಕಂಪ್ಲಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರೆ

ಬಳ್ಳಾರಿ: ಭತ್ತ, ಜೋಳ, ರಾಗಿ ಮತ್ತು ಮೆಕ್ಕಜೋಳ ಇನ್ನಿತರೆ ಬೆಳೆಗಳ ಷರತ್ತು ರಹಿತ ಖರೀದಿ ಕೇಂದ್ರಗಳನ್ನು ಸ್ಥಾಪಿಸಿ, ನಿರಂತವಾಗಿ ಕಾರ್ಯ ನಿರ್ವಹಿಸುವಂತೆ ಒತ್ತಾಯಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಮುಂಖಡರು ಕಂಪ್ಲಿಯಿಂದ ಆರಿಂಭಿಸಿದ್ದ ಪಾದಯಾತ್ರೆ, ಸೋಮವಾರ ಡಿಸಿ ಕಚೇರಿ ತಲುಪಿತು.

ಪ್ರತಿಭಟನೆ ವೇಳೆ ರೈತರು ಅರೆಬೆತ್ತಲೆಯಾಗಿ ಪಾಲ್ಗೊಂಡಿದ್ದರು. ಖರೀದಿ ಮಾಡಿದ ಬೆಳೆಗೆ ಒಂದು ವಾರದೊಳಗೆ ರೈತರ ಖಾತೆಗೆ ಹಣ ಪಾವತಿಸಬೇಕು. ಜಿಲ್ಲೆಯಲ್ಲಿ ಮೆಣಸಿನಕಾಯಿ ಮಾರುಕಟ್ಟೆಯನ್ನು ಕೂಡಲೇ ಸ್ಥಾಪಿಸಬೇಕು. ಭತ್ತದ ಬೆಂಬಲ ಬೆಲೆಯನ್ನು 3500 ರೂ. ನಿಗದಿಗೊಳಿಸಬೇಕು. ಬೇರೆ ರಾಜ್ಯಗಳಿಂದ ಖರೀದಿಸುವ ಅಕ್ಕಿಯನ್ನು ನಿಲ್ಲಿಸಿ, ನಮ್ಮ ರೈತರು ಬೆಳೆದ ಭತ್ತವನ್ನು ಖರೀದಿಸಿ ಹಂಚಿಕೆ ಮಾಡಬೇಕು. ಡಾ.ಎಂ.ಎಸ್.ಸ್ವಾಮಿನಾಥನ ವರದಿಯಂತೆ ತಜ್ಞರಿಂದ ಪರಿಷ್ಕರಿಸಿ ನೂತನ ಎಂಎಸ್‌ಪಿ ದರ ನಿಗದಿಪಡಿಸಬೇಕು. ರಾಜ್ಯ ಸರ್ಕಾರ ಜಾರಿಗೊಳಿಸದ ಕೃಷಿ ಕಾಯ್ದೆಗಳನ್ನು ಶಿಘ್ರ ಹಿಂಪಡೆಯಬೇಕು. ಅಲ್ಲದೆ, ನಕಲಿ ಬೀಜ, ರಸಗೊಬ್ಬರ ಹಾಗೂ ರಾಸಾಯನಿಕ ಕ್ರಿಮಿನಾಶಕ ಮಳಿಗೆಗಳ ಪರವಾನಗಿ ರದ್ದುಪಡಿಸಿ, ಕಾನೂನು ಕ್ರಮಕೈಗೊಳ್ಳಬೇಕು. ಕಂಪ್ಲಿ ಎಪಿಎಂಸಿಯಲ್ಲಿ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸಬೇಕು. ಅಂಥವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಪ್ರಮುಖರಾದ ಕೆ.ರಮೇಶ, ಟಿ.ಗಂಗಣ್ಣ, ಎಂ. ಮಂಜುನಾಥ, ದೇವೆಂದ್ರಪ್ಪ, ಬಿ.ಕೆ. ವೆಂಕೋಭಣ್ಣ, ಕುರಿಹುಸೇನಪ್ಪ, ಮಾಬುಸಾಬ್, ಎನ್.ತಿಮ್ಮಪ್ಪ, ಕುರಿಸಿದ್ದಪ್ಪ, ಇಟಗಿ ವಿರುಪಣ್ಣ ಇತರರಿದ್ದರು.