ಜಿಲ್ಲೆ

ವಾಲ್ಮೀಕಿ ಚಿಂತನೆ ಮಾರ್ಗದರ್ಶಕ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ವ್ಯಕ್ತಿಯ ನಡತೆ ಮತ್ತು ಜೀವನ ನಡೆಸಲು ವಾಲ್ಮೀಕಿ ಅವರ ಚಿಂತನೆಗಳು ಮಾರ್ಗದರ್ಶಕವಾಗಿವೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರೊ. ವೆಂಕಟಗಿರಿ ದಳವಾಯಿ ಹೇಳಿದರು.

ನಗರದ ವಿಎಸ್‌ಕೆ ವಿವಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಆಧುನಿಕ ದಿನಗಳಲ್ಲಿ ಜಯಂತಿಗಳು ವರ್ತಮಾನಗಳ ಬಗ್ಗೆ ತಿಳಿಸುತ್ತದೆ. ನಮ್ಮ ದೇಶದ ಪರಂಪರೆ ಕಾಪಾಡುವುದರಲ್ಲಿ ಯುವಕರ ಪಾತ್ರ ಬಹುಮುಖ್ಯವಾಗಿದೆ ಎಂದರು.

ಮಹರ್ಷಿ ವಾಲ್ಮೀಕಿಯ ಚಿಂತನೆಗಳು ಮತ್ತು ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಮ್ಮ ಜೀವನ ಅರ್ಥಪೂರ್ಣವಾಗುತ್ತದೆ ಎಂದು ಸಲಹೆ ನೀಡಿದರು.

ವಿವಿ ಕುಲಸಚಿವ ಸಿ.ನಾಗರಾಜು ಮಾತನಾಡಿ, ಮಹನೀಯರ ಜಯಂತಿಗಳು ಜೀವನದ ಯಶೋಗಾಥೆಗಳನ್ನು ಪಸರಿಸುವುದು ಉದ್ದೇಶವಾಗಿದೆ. ರಾಮಾಯಣವನ್ನು ಮುಂದಿನ ಪೀಳಿಗೆಗೆ ಕೊಂಡಯ್ಯುವುದು ಕರ್ತವ್ಯವಾಗಿದೆ. ವಾಲ್ಮೀಕಿ ರಾಮಾಯಣವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಯಶಸ್ವಿ ವ್ಯಕ್ತಿಯಾಗಬಹುದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ವಿವಿ ಮೌಲ್ಯಮಾಪನ ಕುಲಸಚಿವ ಪ್ರೊ.ಎನ್.ಎಂ. ಸಾಲಿ ಮಾತನಾಡಿ, ರಾಮಾಯಾಣದಲ್ಲಿ ಒಂದು ಪ್ರಮುಖವಾದ ಅಂಶವೆಂದರೆ ಜೀವನದ ಮೌಲ್ಯ. ಒಬ್ಬ ವ್ಯಕ್ತಿಯ ನಡತೆ, ಪ್ರಾಮಾಣಿಕತೆ, ಸತ್ಯ ಸೇರಿದ ಚಿತ್ರಣವೇ ರಾಮಾಯಾಣವಾಗಿದೆ ಎಂದು ಅಭಿಪ್ರಾಯ ಪಟ್ಟರು.