ಜಿಲ್ಲೆ

ಬಳ್ಳಾರಿ ಉತ್ಸವಕ್ಕೆ ಹರಿದುಬಂದ ಜನಸ್ತೋಮ

ಬಳ್ಳಾರಿ: ಮೊದಲ ಬಾರಿಗೆ ಗಣಿನಾಡಿನಲ್ಲಿ ಬಳ್ಳಾರಿ ಉತ್ಸವ ಜರುಗುತ್ತಿದ್ದು, ಅನೇಕ ಸಾಹಸ ಕ್ರೀಡೆ, ಮತ್ಸೃಲೋಕ, ಫಲಪುಷ್ಪ ಪ್ರದರ್ಶನ ನೋಡಲು ಜನಸ್ತೋಮ ಹರಿದು ಬಂತು. ನಗರದ ಮುನ್ಸಿಪಲ್ ಮೈದಾನದಲ್ಲಿ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಬಳ್ಳಾರಿ ಉತ್ಸವದಲ್ಲಿ ಮನಸೂರೆಗೊಳಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಇಳಕಲ್ ಸೀರೆ, ಕೃಷಿ ತಂತ್ರಜ್ಞಾನ, ಸಿರಿಧಾನ್ಯದ ಮಹತ್ವ, ಪೊಲೀಸ್ ಇಲಾಖೆಯಿಂದ ರೈಫಲ್‌ಗಳ ಪ್ರದರ್ಶನ, ಅರಣ್ಯ ಇಲಾಖೆಯಿಂದ ಕಾಡು ನಿರ್ಮಾಣ, ಜಲಾನಯನ ಪ್ರದೇಶ ಮಾದರಿ ನಿರ್ಮಾಣ, ತರಹೇವಾರಿ ತಿನಿಸುಗಳು, ಇಲಾಖಾವಾರು ಮಾಹಿತಿ, ಪುಸ್ತಕ ಮಳಿಗೆಗಳು, ಸಾಲ ಸೌಲಭ್ಯ ಕುರಿತು ಜನರಿಗೆ ಮಾಹಿತಿ ನೀಡುವ ಅನೇಕ ಮಳಿಗೆಗಳಿಗೆ ಜನರು ಭೇಟಿ ನೀಡುತ್ತಿದ್ದ ಪರಿ ವಿಶೇಷವಾಗಿತ್ತು.

ಸ್ವಚ್ಛ ತಿಳಿ ನೀರಿನ ತೊಟ್ಟಿಯಲ್ಲಿ ವಿವಿಧ ವರ್ಣದ ಮತ್ಸ್ಯಗಳು ಅತ್ತಿಂದ ಇತ್ತ, ಇತ್ತಿಂದ ಅತ್ತ ಈಜುವುದನ್ನು ನೋಡೀ ವೀಕ್ಷಕರು ಆನಂದಿಸಿದರು. ಬಿಳಿ, ತಿಳಿ ಗುಲಾಬಿ, ಹಸಿರು ವರ್ಣ ಚಿತ್ತಾರದ ಮೀನುಗಳನ್ನು ಕಂಡು ಚಿಣ್ಣರು ಖುಷಿ ಪಟ್ಟರು. ಥೈಲ್ಯಾಂಡ್‌ನ ಲೆಮನ್ ಆಸ್ಕರ್, ಜಪಾನೀಸ್ ಕೋಯಿ ಕಾರ್ಟ್, ಸಿಂಗಾಪುರ ಆಮೆ, ಮಾರಕ ದಂತ ಪಕ್ತಿಯಿಂದ ಕುಖ್ಯಾತವಾಗಿರುವ ಪಿರಾನಾ ಸೇರಿದಂತೆ ಹಲವು ವಿದೇಶಿ ಮೂಲದ ಮೀನಿನ ತಳಿಗಳು ಗಮನ ಸೆಳೆಯಿತು. ಕ್ಯಾಟ್, ಕೋಯಿ ಕಾರ್ಮ್, ಟೈಗರ್ ಆಸ್ಕರ್, ಕ್ಲಾನ್, ರೆಡ್ ಕ್ಯಾಪ್‌ಗೋಲ್ಡ್, ಲಯನ್ ಹೆಡ್, ಫೈಟರ್, ರೆಡ್ ಸ್ಪಾಟ್‌ಸ್ಪೋರಮ್, ಚಿಚಲಟ್ಸ್, ಸ್ಟಾಲ್, ಮಲಾಬಿ ಗೊರಮೆ, ಶಕರ್ ಕ್ಯಾಟ್ ಸ್ನೇಕ್ ಹೆಡ್‌, ಡಿಸ್ಕಸ್, ಪೈರ್ ರೆಡ್ ಆಶಲರ್, ಹನಿ(ಜೇನು) ಹಾಗೂ ಪರ್ಲ್ (ಮುತ್ತಿನ ಕೃಷಿ) ಬಣ್ಣದ ಗ್ರೂಮೆ ಹಾಗೂ ನಕ್ಷತ್ರ ಮೀನು ಸೇರಿ ಒಟ್ಟು 48ಕ್ಕೂ ಹೆಚ್ಚಿನ ತಳಿಯ ಮೀನುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಮರಳಿನಲ್ಲಿ ಅರಳಿದ ಕಲಾಕೃತಿಗಳು: ಉತ್ಸವದಲ್ಲಿ ಮರಳು ಕಲಾಕೃತಿ ಶಿಲ್ಪಿಗಳ ಕೈಚಳಕದಲ್ಲಿ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳು ಅದ್ಭುತವಾಗಿ ಅರಳಿವೆ. ಎ.ಪಿ.ಜೆ.ಅಬ್ದುಲ್ ಕಲಾಂ, ಸಂಡೂರಿನ ಕುಮಾರಸ್ವಾಮಿ ದೇವಸ್ಥಾನ, ಕುರುಗೋಡು ದೊಡ್ಡ ಬಸವೇಶ್ವರ, ಬಳ್ಳಾರಿ ಕೋಟೆಯನ್ನು ಅತ್ಯಂತ ನಾಜೂಕು ಹಾಗೂ ಅಚ್ಚುಕಟ್ಟಾಗಿ ಕಲಾಕೃತಿಗಳು ಮನಗೆದ್ದವು. ಕಲಾಕೃತಿಗಳ ಎದುರು ಜನರು ತಂಡೋಪತಂಡವಾಗಿ ಆಗಮಿಸಿ, ಸೆಲ್ಫಿ ತೆಗೆದುಕೊಂಡರು. ಮರಳು ಶಿಲ್ಪ ಕಲಾಕೃತಿಗಳ ರಚನೆಗಾಗಿ ಸುಮಾರು 55 ಟನ್ ಮರಳು ಬಳಕೆ ಮಾಡಲಾಗಿದೆ. ಸ್ಮಾರಕಗಳ ಮಹತ್ವ ಸಾರುವ ನಿಟ್ಟಿನಲ್ಲಿ ಮರಳು ಕಲಾಕೃತಿಗಳ ರಚನೆ ಮಾಡಲಾಗಿದೆ ಎನ್ನುತ್ತಾರೆ ಅಂತಾರಾಷ್ಟ್ರೀಯ ಮರಳು ಶಿಲ್ಪಿ ಕಲಾವಿದ ನಾರಾಯಣ್ ಸಾಹು.

ಮನಗೆದ್ದ ಸಾಹಸ ಕ್ರೀಡೆಗಳು: ನಗರದ ಕೋಟೆ ಪ್ರದೇಶದ ಆವರಣದಲ್ಲಿ ನೋಪಾಸನಾ ವತಿಯಿಂದ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ರಾಕ್‌ಕ್ಲೈಂಬಿಂಗ್, ಜಿಪ್‌ಲೈನ್, ಬೈಕ್ ಸ್ಟಂಟ್ ಕ್ರೇಜ್, ಕಬಡ್ಡಿ ಆಟಗಳು ಯುವಜನತೆ ಗಮನ ಸೆಳೆಯಿತು. ನೂತನ ಜಿಲ್ಲಾಧಿಕಾರಿ ಕಚೇರಿ ಆಚರಣದಲ್ಲಿ ಹಾಟ್ ಬಿಸ್ಟೆಂಟ್ ತಂಡದಿಂದ ಸಾಹಸಮಯ ಬೈಕ್ ಪ್ರದರ್ಶನ ನಡೆಯಿತು. ಭಟ್ಕಳ ಮೂಲದ ಬೈಕ್ ರೈಡರ್‌ಗಳಾದ ಮಹಮದ್ ಗೌಸ್, ಅಖಿಲ್ ಹಾಗೂ ಗೋವಾ ಮೂಲದ ಸಮೀರ್ ತಮ್ಮ ವಿಭಿನ್ನ ಬೈಕ್ ಸ್ಟಂಟ್‌ಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.

ಮನಗೆದ್ದ ಕಾಂತಾರದ ಪಂಜುರ್ಲಿ ದೈವ: ಕನಕದುರ್ಗಮ್ಮ ದೇವಸ್ಥಾನ ಪುಷ್ಪ ಕಲಾಕೃತಿ ಹಾಗೂ ಕಾಂತಾರ ಚಲನಚಿತ್ರ ಪಂಜುರ್ಲಿ ದೈವ ಜನಮೆಚ್ಚುಗೆ ಪಡೆಯಿತು. ಕಲ್ಲಂಗಡಿ ಹಣ್ಣುಗಳನ್ನು ಬಳಸಿ ನಟ ಪುನೀತ್ ರಾಜ್‌ಕುಮಾರ್ ಅವರ ಬಾಲ್ಯದಿಂದ ಹಿಡಿದು ಇತ್ತೀಚೆನವರೆಗಿನ ಚಿತ್ರಗಳನ್ನು ರಚಿಸಲಾಗಿತ್ತು. ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರು, ಮಹಾಪುರುಷರು, ಡಾ.ರಾಜ್‌ಕುಮಾರ್, ಅಬ್ದುಲ್ ಕಲಾಂ, ಡಾ.ಬಿ.ಆರ್.ಅಂಬೇಡ್ಕರ್, ಮಹಾತ್ಮ ಗಾಂಧೀಜಿ, ಭಗತ್‌ಸಿಂಗ್, ಛತ್ರಪತಿ ಶಿವಾಜಿ, ವಿಶ್ವಗುರು ಬಸವಣ್ಣ, ಸ್ವಾಮಿ ವಿವೇಕಾನಂದ, ಡಾ.ವೀರೇಂದ್ರ ಹೆಗ್ಗಡೆ, ತಿರುಪತಿ ತಿಮ್ಮಪ್ಪ, ಈಶ್ವರ, ಗಣಪ, ಜಿಂಕೆಗಳನ್ನು ವಿವಿಧ ಹಣ್ಣುಗಳನ್ನು ಬಳಸಿದ್ದು, ಕಲಾವಿದರ ಕೈಚಳಕಕ್ಕೆ ಮೆಚ್ಚುಗೆ ವ್ಯಕ್ತವಾಯಿತು. ತೆಂಗಿನ ಕಾಯಿ, ಸಿಪ್ಪೆ ಹಾಗೂ ನಾರಿನಲ್ಲಿ ಅರಳಿದ ಗಜರಾಜ, ಆಮೆ, ಸರ್.ಎಂ ವಿಶ್ವೇಶ್ವರಯ್ಯ, ಕ್ಷಿಪಣಿ ಮಾನವ ಅಬ್ದುಲ್ ಕಲಾಂ, ಗೌತಮಬುದ್ಧ ಕಲಾಕೃತಿ ಯುವಜನರ ಮನ ಸೆಳೆಯಿತು. ಬಳ್ಳಾರಿಯ ಮುಖ್ಯ ವೃತ್ತದಲ್ಲಿ ನಿರ್ಮಿಸಲು ಉದ್ದೇಶಿಸಿದ ಗಡಿಯಾರ ಸ್ಥಂಭ, ನೇಗಿಲ ಯೋಗಿ, ಸಿದ್ದೇಶ್ವರ ಸ್ವಾಮೀಜಿ, ಒಂದು ಜಿಲ್ಲೆ ಒಂದು ಉತ್ಪನ್ನ ಪರಿಕಲ್ಪನೆ ನೋಡುಗರಿಗೆ ಅದ್ಭುತ ಅನುಭವ ನೀಡಿದವು. ಮೇಕ್ ಇನ್ ಇಂಡಿಯಾ, ಜಿ-20 ಶೃಂಗ ಸಭೆ, ಐಎನ್‌ಎಸ್ ವಿಕ್ರಾಂತ್, ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಹಾಗೂ ಪ್ರಧಾನಿ ನರೇಂದ್ರ ಮೋದಿ, ಯೂಕ್ರೇನ್-ರಷ್ಯಾಯುದ್ಧ ಕುರಿತ ಸಂದೇಶ ಫಲಪುಷ್ಪ ಪ್ರದರ್ಶನದಲ್ಲಿ ಗಮನ ಸೆಳೆದವು.

ಅಂಗೈನಲ್ಲಿ ಮೂಡಿದ ಚಿತ್ತಾರ: ವಿವಿಧ ಶೈಲಿಯ ಮೆಹಂದಿ ಪ್ರದರ್ಶನ ಹೆಣ್ಣುಮಕ್ಕಳಲ್ಲಿ ಖುಷಿ ಕಂಡುಬಂತು. ಸ್ಪರ್ಧೆಯಲ್ಲಿ 70ಕ್ಕೂ ಹೆಚ್ಚು ಯುವತಿಯರು, ಮಹಿಳೆಯರು ಪಾಲ್ಗೊಂಡು, ಎಲ್ಲರೂ ಗಮನ ಸೆಳೆಯುವಂತೆ ಮೆಹಂದಿ ಹಾಕಿಸಿಕೊಂಡರು. ಪಾಲಿಕೆ ಮೇಯರ್ ಎಂ.ರಾಜೇಶ್ವರಿ ಸ್ವತಃ ಮೆಹಂದಿ ಹಾಕುವ ಮೂಲಕ ಗಮನ ಸೆಳೆದರು.