ಬಳ್ಳಾರಿ : ನೆರೆಯ ಆಂದ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ವಿಡಪನಕಲ್ಲು- ಚೇಳ್ಳಗುರ್ಕಿ ಬಳಿ ಬೆಳಗಿನ ಜಾವ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಬಿಮ್ಸ್ ಇಬ್ಬರು ವೈದ್ಯರು ಸೇರಿ ಮೂವರು ಭಾನುವಾರ ಮೃತಪಟ್ಟಿದ್ದಾರೆ.
ಇಲ್ಲಿನ ಬಿಮ್ಸ್ ಆಸ್ಪತ್ರೆಯ ಕ್ಯಾನ್ಸರ್ ವೈದ್ಯ ಡಾ.ಗೋವಿಂದರಾಜುಲು, ನೇತ್ರ ತಜ್ಞ ಡಾ.ಯೋಗೀಶ್ ಮತ್ತು ವಕೀಲ ವೆಂಕಟನಾಯ್ಡು ಮೃತರು. ಖಾಸಗಿ ವೈದ್ಯ ಹಾಗೂ ಗಂಧರ್ವ ಗಿರಿ ಎಸ್ಟೇಟ್ ಮಾಲೀಕ ಡಾ.ಅಮರೇಗೌಡ ಪಾಟೀಲ್ ಗಾಯಗೊಂಡಿದ್ದಾರೆ.
ಈ ನಾಲ್ವರು ಬ್ಯಾಂಕಾಕ್ ಪ್ರವಾಸ ಮುಗಿಸಿಕೊಂಡು ಬೆಂಗಳೂರು ವಿಮಾನ ನಿಲ್ದಾಣದಿಂದ ಅನಂತಪುರಂ ಮಾರ್ಗವಾಗಿ ಬಳ್ಳಾರಿಗೆ ಆಗಮಿಸುತ್ತಿದ್ದರು. ಕಾರು ಚಲಾಯಿಸುತ್ತಿದ್ದ ವಕೀಲ ವೆಂಕಟನಾಯ್ಡು ನಿದ್ರೆಯ ಮಂಪರಿನಲ್ಲಿ ತಾಲೂಕಿನ ಚೆಳ್ಳಗುರ್ಕಿ ಬಳಿ ರಸ್ತೆಯ ಸಮೀಪದ ಮರಕ್ಕೆ ಡಿಕ್ಕಿ ಒಡೆದಿದ್ದಾರೆ. ಇನ್ನೋರ್ವ ವ್ಯಕ್ತಿಯಾದ ಅಮರೇಗೌಡ ಬಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆ. ಅಲ್ಲದೆ, ಅವರ ಐ ಫೋನ್ ಮೂಲಕ ಅಪಘಾತದ ವಿಷಯವು ಮೆಸೇಜ್ ಮೂಲಕ ಸಂಬಂಧಿಕರಿಗೆ ತಿಳಿದಿದೆ ಎನ್ನಲಾಗಿದೆ. ಸಾವಿಗೆ ಬಿಮ್ಸ್ ನಿರ್ದೇಶಕ ಡಾ.ಗಂಗಾಧರಗೌಡ ಮತ್ತು ಸಿಬ್ಬಂದಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.