ಸಿರಿಗೇರಿ ಪನ್ನರಾಜ್, ಅಧ್ಯಕ್ಷ, ಅರಿವು ಸಂಸ್ಥೆ. 
ಜಿಲ್ಲೆ

ಮೂರು ದಿನ ವಿಶ್ವಕವಿ ಸಮ್ಮೇಳನ

ಬಳ್ಳಾರಿ: ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ಅ.21 ರಿಂದ ಅ.23 ರವರೆಗೆ ಸಂಗಂ ವಿಶ್ವಕವಿ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅರಿವು ಸಂಸ್ಥೆ ಅಧ್ಯಕ್ಷ ಸಿರಿಗೇರಿ ಪನ್ನರಾಜ್ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೇಂದ್ರ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಪ್ರವಾಸೋದ್ಯಮ ಇಲಾಖೆ, ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಬಿಐಟಿಎಂ ಕಾಲೇಜು ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.

ಮೊದಲನೇ ದಿನ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಕಾರ್ಯಕ್ರಮ ಉದ್ಘಾಟಿಸುವರು. ಅ.22 ರಂದು ಸಿಎಂ ಬಸವರಾಜ ಬೊಮ್ಮಾಯಿ ಕವಿಗಳಿಗೆ ಸಂಗಂ ಸಾಹಿತ್ಯ ಪುರಸ್ಕಾರ ಪ್ರದಾನ ಮಾಡುವರು. ಸಮಾರೋಪ ಸಮಾರಂಭದ ಪ್ರೊ.ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸುವರು. ಹಿರಿಯ ಸಾಹಿತಿಗಳಾದ ರಾಜೇಂದ್ರ ಚೆನ್ನಿ, ನಾಗಭೂಷಣ ಸ್ವಾಮಿ ಹಾಗೂ ವಿನಯ ವಕ್ಕುಂದಾ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಮೂರೂ ದಿನಗಳ ಕಾರ್ಯಕ್ರಮದ ನಿಯೋಜಕರಾಗಿ ಎಚ್.ಎಚ್.ಶಿವಪ್ರಕಾಶ ಕಾರ್ಯನಿರ್ವಹಿಸುವರು ಎಂದರು.

ಮೂರು ದಿನ 21 ಕವಿಗೋಷ್ಠಿಗಳು ನಡೆಯಲಿದ್ದು, ರಾಜ್ಯ, ಹೊರರಾಜ್ಯಗಳ ಕವಿಗಳಲ್ಲದೇ ಇಸ್ರೇಲ್, ಅಜೆರ್ಂಟೈನಾ, ಇರಾನ್, ಡಾರ್ಜಿಲಿಂಗ್, ಚಿಲಿ, ಅಲ್ಜೀರಿಯಾ, ಎಲ್ ಸಾಲ್ವೆಡರ್, ಫೆರೋ ಐಲ್ಯಾಂಡ್, ಕೊಲಂಬಿಯಾ, ಅಮೆರಿಕಾ, ಪೆರು ದೇಶಗಳಿಂದ ಸಾಹಿತಿಗಳು ಬರಲಿದ್ದಾರೆ. ಸ್ಥಳೀಯ ಮತ್ತು ರಾಜ್ಯ ಕವಿಗಳಿಗೆ ಅದ್ಯತೆ ನೀಡಲಾಗುವುದು ಎಂದರು. ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ, ಪ್ರಮುಖರಾದ ಡಾ.ಕೆ.ಶಿವಲಿಂಗಪ್ಪ ಹಂದಿಹಾಳ್, ವಿರೇಂದ್ರ ರವಿಹಾಳ್, ಡಾ. ಆರವಿಂದ ಪಾಟೀಲ್ ಇದ್ದರು.

ಸಂಗಂ ವಿಶ್ವಕವಿ ಸಮ್ಮೇಳನಕ್ಕೆ 30 ರಿಂದ 32 ಲಕ್ಷ ರೂ.ವೆಚ್ಚ ತಗುಲಬಹುದು ಎಂದು ಅಂದಾಜಿಸಲಾಗಿದೆ. ಅನುದಾನವನ್ನು ಕೋರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.| ಸಿರಿಗೇರಿ ಪನ್ನರಾಜ್, ಅರಿವು ಸಂಸ್ಥೆ ಅಧ್ಯಕ್ಷ, ಬಳ್ಳಾರಿ