ಜಿಲ್ಲೆ

ಮೂವರು ಬಾಣಂತಿಯರಿಗೆ ಇಲಿ ಜ್ವರ

ಬಳ್ಳಾರಿ : ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಸಿಸೇರಿಯನ್‌ಗೆ ಒಳಗಾಗಿ, ಬಿಮ್ಸ್ ದಾಖಲಾಗಿದ್ದ ಐವರು ಬಾಣಂತಿಯರ ಪೈಕಿ ಮೂವರಿಗೆ ಇಲಿ ಜ್ವರ (ಲೆಪ್ರೊಸ್ಪಿರೊಸಿಸ್) ಇದ್ದಿದ್ದು ವರದಿಯಲ್ಲಿ ಖಚಿತವಾಗಿದೆ. 'ಈಗಾಗಲೇ ಬಾಣಂತಿಯರ ಪರೀಕ್ಷಾ ವರದಿಗಳು ಕೈಸೇರಿವೆ. ಬಿಮ್ಸ್‌ಗೆ ದಾಖಲಾಗಿದ್ದ ಐವರು ಬಾಣಂತಿಯರ ಪೈಕಿ ಸುಮಲತಾ, ಮಹಾಲಕ್ಷ್ಮಿ ಮತ್ತು ಸುಮಯಾ ಎಂಬುವರಿಗೆ ಇಲಿ ಜ್ವರ ಇದ್ದಿದ್ದು ದೃಢಪಟ್ಟಿದೆ. ಸುಮಲತಾ ಮತ್ತು ಮಹಾಲಕ್ಷ್ಮಿ ಗುಣಮುಖರಾಗಿ, ಮನೆಗೆ ಮರಳಿದ್ದಾರೆ. ಆದರೆ, ಸುಮಯಾ ಅವರಿಗೆ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಮುಂದುವರೆದಿದೆ. ಅವರ ಸ್ಥಿತಿ ಮೊದಲಿಗಿಂತಲೂ ಈಗ ಬಹಳಷ್ಟು ಸುಧಾರಿಸಿದೆ. ಅವರ ಮೂತ್ರಪಿಂಡದಲ್ಲಿ ಇನ್ನೂ ಸಮಸ್ಯೆಯಿದೆ ಎಂದು ವೈದ್ಯರು ತಿಳಿಸಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ನ. 9 ರಿಂದ 11ರ ನಡುವಿನ ಅವಧಿಯಲ್ಲಿ ಸಿಸೇರಿಯನ್‌ಗೆ ಒಳಗಾಗಿದ್ದ 7 ಮಹಿಳೆಯರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಇವರಲ್ಲಿ ಇಬ್ಬರು ಜಿಲ್ಲಾಸ್ಪತ್ರೆಯಲ್ಲೇ ಮೃತಪಟ್ಟಿದ್ದರು. ಹೀಗಾಗಿ ಉಳಿದ ಐವರನ್ನು ಬಿಮ್ಸ್‌ಗೆ ದಾಖಲಿಸಲಾಗಿತ್ತು. ಅಲ್ಲಿ ಇಬ್ಬರು ಕೊನೆಯುಸಿರೆಳೆದಿದ್ದರು.