| ಅಶೋಕ ನೀಮಕರ್ ಬಳ್ಳಾರಿ
ರಂಗಭೂಮಿಯ ಹಿರಿಯ ಕಲಾವಿದೆ, ನಾಡೋಜ ಸುಭದ್ರಮ್ಮ ಮನ್ಸೂರು (81) ಬುಧವಾರ ರಾತ್ರಿ ನಿಧನರಾದರು. ಬಳ್ಳಾರಿಯ ರೇಡಿಯೋ ಪಾರ್ಕ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಅವರಿಗೆ ಉಸಿರಾಟದ ತೊಂದರೆಯಾಗಿದ್ದರಿಂದ ಬುಧವಾರ ರಾತ್ರಿ ವಿಮ್ಸ್ಗೆ ಕರೆದೊಯ್ಯಲಾಗುತ್ತಿತ್ತು. ಆದರೆ, ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದರು. ಸುಭದ್ರಮ್ಮ ಮನ್ಸೂರು ಇಳಿ ವಯಸ್ಸಿನಲ್ಲೂ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದರು. ಹಿಂದುಸ್ತಾನಿ ಗಾಯಕರಾಗಿಯೂ ಜನಮನ ಸೂರೆಗೊಂಡಿದ್ದರು. 12ನೇ ವಯಸ್ಸಿನಲ್ಲಿ ಮಂಗಳೂರಿನ ಸುಮಂಗಲಿ ನಾಟ್ಯ ಸಂಘದ ಮೂಲಕ ವೃತ್ತಿ ರಂಗಭೂಮಿ ಪ್ರವೇಶ ಮಾಡಿದ್ದರು. ಇವರಿಗೆ ಇಬ್ಬರು ಪುತ್ರರು, ಪುತ್ರಿ, ಅಪಾರ ಬಂಧು ಬಳಗವಿದೆ. ಬಳ್ಳಾರಿಯ ಹರಿಶ್ಚಂದ್ರಘಾಟ್ನಲ್ಲಿ ಗುರುವಾರ ಅಂತ್ಯಕ್ರಿಯೆ ನೆರವೇರಿತು.
ರಂಗಭೂಮಿಯ ಸುದೀರ್ಘ ಪಯಣದಲ್ಲಿ ಸುಭದ್ರಮ್ಮ ಮನ್ಸೂರು ಎಂದೂ ದಣಿದಿರಲಿಲ್ಲ. ಬಾಲ್ಯದಿಂದಲೇ ಬೆಳೆದ ನಾಟಕದ ನಂಟನ್ನು 81ರ ವಯಸ್ಸಿನಲ್ಲೂ ಹೊಂದಿದ್ದರು. ಯಾವುದೇ ಪಾತ್ರವಾದರೂ ಲೀಲಾಜಾಲವಾಗಿ ಅಭಿನಯಿಸುತ್ತಿದ್ದ ಅವರು, ರಂಗಭೂಮಿಯ ಕಿರೀಟಪ್ರಾಯವಾಗಿದ್ದರು. ಜ್ವಾಲಾಪತಿ ಹಾಗೂ ಭಾಗ್ಯಮ್ಮ ದಂಪತಿ ಪುತ್ರಿ ಸುಭದ್ರಮ್ಮ, 1939ರಲ್ಲಿ ಬಳ್ಳಾರಿಯಲ್ಲಿ ಜನಿಸಿದರು. ಕನ್ನಡ ಮಾತೃಭಾಷೆಯಾದರೂ ತೆಲುಗು ಮಾಧ್ಯಮದಲ್ಲಿ ಆರನೇ ತರಗತಿವರೆಗೆ ಓದಿದರು. ತಂದೆ ಮೆಕಾನಿಕ್ ಆಗಿದ್ದರೂ ಹಾಮೋನಿಯಂ ವಾದಕರಾಗಿದ್ದರು. ಇದರಿಂದಾಗಿ ಸುಭದ್ರಮ್ಮಗೂ ಸಹಜವಾಗೇ ಸಂಗೀತದ ಆಸಕ್ತಿ ಬೆಳೆದಿತ್ತು. ಎ.ಚಂದ್ರಶೇಖರ ಗವಾಯಿ ಬಳಿ ಶಾಸ್ತ್ರೀಯವಾಗಿ ಸಂಗೀತ ಕಲಿತಿದ್ದರು. ಹಿಂದುಸ್ತಾನಿ ಗಾಯಕಿಯಾಗಿ ಖ್ಯಾತಿ ಪಡೆದಿದ್ದರು. 1951ರಲ್ಲಿ ಮಂಗಳೂರಿನ ಸುಮಂಗಲಿ ನಾಟ್ಯ ಸಂಘವು ಬಳ್ಳಾರಿಯಲ್ಲಿ ಕ್ಯಾಂಪ್ ಮಾಡಿದ್ದು, 12 ವರ್ಷದ ಸುಭದ್ರಮ್ಮ ವೃತ್ತಿ ರಂಗಭೂಮಿ ಪ್ರವೇಶಕ್ಕೆ ಕಾರಣವಾಯಿತು. 14ನೇ ವಯಸ್ಸಿನಲ್ಲಿ ವೃತ್ತಿ ರಂಗಭೂಮಿಯಲ್ಲಿ ಖ್ಯಾತ ನಟರಾಗಿದ್ದ ಲಿಂಗರಾಜ ಮನ್ಸೂರುರನ್ನು ವರಿಸುವ ಮೂಲಕ ಸುಭದ್ರಮ್ಮ ಮನ್ಸೂರು ಆದರು. ರಂಗಭೂಮಿಯ ಮೇರುಪರ್ವತಗಳಾದ ಏಣಗಿ ಬಾಳಪ್ಪರ ಕಲಾವೈಭವ ನಾಟ್ಯ ಸಂಘ, ಮಾಸ್ಟರ್ ಹಿರಣ್ಣಯ್ಯ ಮಿತ್ರಮಂಡಳಿಯಲ್ಲಿ ಒಂದೂವರೆ ದಶಕ ಕಲಾವಿದೆಯಾಗಿ ವಿವಿಧ ಪಾತ್ರಗಳಿಗೆ ಜೀವ ತುಂಬಿದರು. ಆ ಬಳಿಕ ಹವ್ಯಾಸಿ ರಂಗಭೂಮಿ ಹಾಗೂ ತಮ್ಮದೇ ರಂಗತಂಡ ಶರಣರ ಕಲಾಬಳಗದ ಮೂಲಕ ಕಲಾಸೇವೆಯಲ್ಲಿ ಸಕ್ರಿಯರಾಗಿದ್ದರು. ಪೌರಾಣಿಕ, ಐತಿಹಾಸಿಕ, ಭಕ್ತಿಪ್ರಧಾನ, ಸಾಮಾಜಿಕ ಹಾಗೂ ಜಾನಪದ ನಾಟಕಗಳಲ್ಲಿನ ಎಲ್ಲ ಪ್ರಕಾರಗಳಿಗೂ ಸೈ ಅನಿಸಿಕೊಂಡಿದ್ದರು. ಕನ್ನಡದ ಜತೆಗೆ ತೆಲುಗು ನಾಟಕಗಳಲ್ಲಿ ಅಭಿನಯಿಸುವ ಮೂಲಕ ಅವಿಭಜಿತ ಆಂಧ್ರಪ್ರದೇಶದ ಮನೆಮಾತಾಗಿದ್ದರು. ಸುಭದ್ರಮ್ಮ ಅಭಿನಯದ ‘ರಕ್ತರಾತ್ರಿ’, ‘ಹೇಮರಡ್ಡಿ ಮಲ್ಲಮ್ಮ’ ಹಾಗೂ ‘ಕುರುಕ್ಷೇತ್ರ’ ನಾಟಕಗಳು ಅತಿ ಹೆಚ್ಚು ಪ್ರದರ್ಶನ ಕಂಡಿವೆ.
ಬಾಲಕಲಾವಿದೆಯಾಗಿ ರಂಗಭೂಮಿ ಪ್ರವೇಶಿಸಿದ ಸುಭದ್ರಮ್ಮ ಮನ್ಸೂರ್ ಅವರು ಬದುಕಿನ ಏಳುಬೀಳುಗಳ ನಡುವೆಯೂ ವೃತ್ತಿ ರಂಗಭೂಮಿಯಲ್ಲಿ ತಮ್ಮದೇ ಛಾಪು ಮೂಡಿಸಿದವರು. ರಕ್ತರಾತ್ರಿ ನಾಟಕದಲ್ಲಿನ ದ್ರೌಪದಿ ಪಾತ್ರ, ಕುರುಕ್ಷೇತ್ರ ನಾಟಕದ ಗಾಂಧಾರಿ ಪಾತ್ರಗಳಿಗೆ ಜೀವತುಂಬುವ ಮೂಲಕ ಮನೆಮಾತಾಗಿದ್ದರು. ಅವರ ನಿಧನದಿಂದಾಗಿ ರಂಗಭೂಮಿಯು ಅರ್ನ್ಯಘ ರತ್ನವೊಂದನ್ನು ಕಳೆದುಕೊಂಡಂತಾಗಿದೆ. | ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ
ಸಾಟಿಯಿಲ್ಲದ ಕಲಾವಿದೆ
ಅಮೋಘ ಅಭಿನಯ, ಅಸ್ಖಲಿತ ಸಂಭಾಷಣೆ, ಅದ್ಭುತ ಗಾಯನದ ತ್ರಿವೇಣಿ ಸಂಗಮವಾಗಿದ್ದರು ಸುಭದ್ರಮ್ಮ ಮನ್ಸೂರು. ಹವ್ಯಾಸಿ ನಾಟಕಗಳಲ್ಲಿ ಅಭಿನಯಿಸುವ ಮೂಲಕ ಗ್ರಾಮೀಣ ಭಾಗದಲ್ಲಿ ರಂಗಭೂಮಿಯ ಜೀವಂತಿಕೆಗೆ ಕಾರಣವಾದರು.
ಪ್ರಶಸ್ತಿಗಳ ಮೌಲ್ಯ ಹೆಚ್ಚಿಸಿದರು
ರಾಜ್ಯ ನಾಟಕ ಅಕಾಡೆಮಿ, ರಾಜ್ಯೋತ್ಸವ, ಗುಬ್ಬಿ ವೀರಣ್ಣ, ಚಿಂದೋಡಿ ಲೀಲಾ ಸೇರಿ ಅನೇಕ ಪ್ರಶಸ್ತಿಗಳು ಬಂದವು. ಕನ್ನಡ ವಿಶ್ವ ವಿದ್ಯಾಲಯ ನಾಡೋಜ ಅವರನ್ನು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪ್ರದಾನ ಮಾಡಿದ್ದವು. ಸಾಹಿತಿ ಕುಂ.ವೀರಭದ್ರಪ್ಪ ಬರೆದಿರುವ ಸುಭದ್ರಮ್ಮ ಮನ್ಸೂರು ಕುರಿತ ಕೃತಿಯನ್ನು ರಾಜ್ಯ ನಾಟಕ ಅಕಾಡೆಮಿ ಪ್ರಕಟಿಸಿದೆ. ಪತ್ರಕರ್ತ ಗುಡಿಹಳ್ಳಿ ನಾಗರಾಜ ಬರೆದ ‘ರಂಗಸಿರಿ ಸುಭದ್ರಮ್ಮ ಮನ್ಸೂರು’ ಲೇಖನ ಒಂಬತ್ತನೇ ತರಗತಿಯ ಕನ್ನಡ ಪುಸ್ತಕದಲ್ಲಿ ಪಠ್ಯವಾಗಿತ್ತು. ಅವರಿಗೆ 80 ವರ್ಷವಾದಾಗ ‘ರಂಗತೋರಣ’ ಸಂಸ್ಥೆಯಿಂದ ‘ಅಮೃತಾಭಿನಂದನೆ’ ಕಾರ್ಯಕ್ರಮ ಆಯೋಜಿಸಿ 53 ಗೀತೆಗಳ ಧ್ವನಿಮುದ್ರಿಕೆ ಹಾಗೂ ‘ಗಾನಕೋಗಿಲೆ’, ‘ಅನುಪಮ ಅಭಿನೇತ್ರಿ’ ಪುಸ್ತಕ ಬಿಡುಗಡೆ ಮಾಡಲಾಗಿತ್ತು.