ಬಳ್ಳಾರಿ : ಸಂಡೂರು ವಿಧಾನಸಭಾ ಉಪಚುನಾವಣೆಯ ಮತದಾನ ಪ್ರಕ್ರಿಯೆ ಏಳು ಗಂಟೆಯಿಂದಲೇ ಆರಂಭವಾಯಿತು. ಬೆಳಗ್ಗೆ ಮತದಾರರು ಮತಗಟ್ಟೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹಕ್ಕು ಚಲಾಯಿಸಲು ಬಾರದ ಹಿನ್ನಲೆ ನಿಧಾನಗತಿಯಲ್ಲಿ ಸಾಗಿತು. ಅಲ್ಲದೆ, ಕೆಲವೊಂದು ಮತಗಟ್ಟೆಗಳಲ್ಲಿ ಬೆರಳೆಣಿಕೆಯಷ್ಟು ಜನರು ಮಾತ್ರ ಸರತಿ ಸಾಲಲ್ಲಿ ನಿಂತು ಹಕ್ಕು ಚಲಾಯಿಸುತ್ತಿದ್ದು ಕಂಡುಬಂತು. ಮಧ್ಯಾಹ್ನದ ವೇಳೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತಗಟ್ಟೆಗಳತ್ತ ಆಗಮಿಸಿದ್ದರಿಂದ ಮತದಾನ ಪ್ರಮಾಣ ಹೆಚ್ಚಿತು.
ಸಂಡೂರು ಪಟ್ಟಣದ ಕಾರ್ಯ ನಿರ್ವಾಹಕ ಅಭಿಯಂತರ ಕಚೇರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಈ. ಅನ್ನಪೂರ್ಣ, ಪತಿ, ಸಂಸದ ಈ.ತುಕಾರಾಮ್, ಪುತ್ರಿ ಚೈತನ್ಯ ಸೌರ್ಪಣಿಕ, ಪುತ್ರ ರಘುನಂದನ್ ಸೇರಿ ಕುಟುಂಬ ಸಮೇತ ಮತ ಹಕ್ಕು ಚಲಾಯಿಸಿದರು. ಮತದಾನಕ್ಕೂ ಮುನ್ನ ಭೀಮತೀರ್ಥ ಆಂಜನೇಯ ದೇವಸ್ಥಾನಕ್ಕೆ ಭೇಟಿ ವಿಶೇಷ ಪೂಜೆ ಸಲ್ಲಿಸಿದರು. ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಮೂಲತಃ ವಿಜಯನಗರ ಜಿಲ್ಲೆಯಾಗಿರುವುದರಿಂದ ಮತ ಚಲಾಯಿಸಿಲ್ಲ. ಆದರೆ, ಪಟ್ಟಣದ ವಿವಿಧ ಮತಗಟ್ಟೆಗಳಿಗೆ ತೆರಳಿ ಮತದಾನದ ಪ್ರಕ್ರಿಯೆ ವೀಕ್ಷಿಸಿದರು. ಕಾರ್ಮಿಕ ಸಚಿವ ಸಂತೋಷ ಲಾಡ್ ತಾಯಿ ಶೈಲಾಜಲಾಡ್ ಮತ ಚಲಾಯಿಸಿದರು.
ತಾಲೂಕಿನ ವಡ್ಡು ಗ್ರಾಮದ 94ನೇ ಮತಗಟ್ಟೆಯಲ್ಲಿ ವಿವಿ ಪ್ಯಾಟ್ ನಲ್ಲಿ ದೋಷ ಕಂಡುಬಂದಿರುವ ಹಿನ್ನೆಲೆಯಲ್ಲಿ ಯಂತ್ರವನ್ನೇ ಬದಲಾಯಿಸಿದ್ದು, 20 ನಿಮಿಷಗಳ ಕಾಲ ತಡವಾಗಿ ಮತದಾನ ಆರಂಭವಾಯಿತು. ಇದನ್ನು ಹೊರತುಪಡಿಸಿದರೆ ಉಳಿದೆಲ್ಲೆಡೆ ಶಾಂತಯುತವಾಗಿ ಮತದಾನ ನಡೆಯಿತು. ಬನ್ನಿಹಟ್ಟಿ ಗ್ರಾಮದಲ್ಲಿ 90 ವರ್ಷದ ಅಜ್ಜಿ ಹನುಮಕ್ಕ ಯಾವುದೇ ವಾಹನ ಸೌಕರ್ಯವೂ ಇಲ್ಲದೇ ನಡೆದುಕೊಂಡೇ ಬಂದು ಮತದಾನ ಮಾಡಿದ್ದು ಗಮನ ಸೆಳೆಯಿತು. ಅದೇ ಗ್ರಾಮದ ಮಂಜುಳಾ ದನ ಮೇಯಿಸಲು ಜಾನುವಾರು ಸಹಿತ ಆಗಮಿಸಿದ್ದರು. ಮತಗಟ್ಟೆಯ ಮುಂಭಾಗದಲ್ಲಿಯೇ ದನ ಬಿಟ್ಟು, ಬುತ್ತಿಯನ್ನು ಇಟ್ಟು ಮತಗಟ್ಟೆಗಳಿಗೆ ತೆರಳಿ ಮತ ಚಲಾಯಿಸಿ ಬಳಿಕ ಜಮೀನಿಗೆ ತೆರಳಿದ್ದು ಕಂಡು ಬಂತು.