ಬಳ್ಳಾರಿ : ಕೃಷಿ, ವೈದ್ಯಕೀಯ, ಹವಾಮಾನ ಸುಸ್ಥಿರತೆ, ಉದ್ಯಮಶೀಲತೆ ಕೇಂದ್ರವಾಗಿ ಹಾಗೂ ಗಣಿಗಾರಿಕೆ ಪೀಡಿತ ಪ್ರದೇಶಗಳಲ್ಲಿ ಮಣ್ಣು ಮತ್ತು ಪರಿಸರ ಮರುಸ್ಥಾಪನೆಯ ಉದ್ದೇಶದಿಂದ ಜಿಲ್ಲೆಯಲ್ಲಿ ರಾಜ್ಯದ ಎರಡನೇ ಜೈವಿಕ ನಾವೀನ್ಯತೆ ಕೇಂದ್ರ( ಬಯೋ ಇನ್ನೋವೇಷನ್ ಸೆಂಟರ್) ಪ್ರಾರಂಭಿಸಲು ಸಜ್ಜಾಗಿದೆ.
ಈ ಯೋಜನೆಯು ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯು ಹಾಗೂ ಕರ್ನಾಟಕ ಗಣಿಗಾರಿಕೆ ಪರಿಸರ ಪುನಃಸ್ಥಾಪನೆ ನಿಗಮ (ಕೆಎಂಇಆರ್‌ಸಿ) ಸಹಭಾಗಿತ್ವದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಕೆಎಂಇಆರ್‌ಸಿಯ ಸಿಎಸ್‌ಆರ್ ನಿಧಿ ಅನುದಾನದಿಂದ ನಿರ್ಮಿಸಲಾಗುವುದು.
ತಾಲೂಕಿನ ಕೊಳಗಲ್ ಬಳಿ ನಾಲ್ಕು ಎಕರೆ ವಿಸ್ತೀರ್ಣದಲ್ಲಿ ಉದ್ದೇಶಿತ ಕೇಂದ್ರವು ಐವತ್ತು ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಇರಲಿದೆ. ಪ್ರಯೋಗಾಲಯ, ಕಚೇರಿಯ ಕೊಠಡಿಗಳು, ಹಂಚಿಕೆಯ ಉಪಕರಣ ಸೌಲಭ್ಯಗಳು ಮತ್ತು ಸಂಬಂಧಿತ ಮೂಲಸೌಕರ್ಯಗಳನ್ನು ಒಳಗೊಂಡಿದೆ. ಡಿಪಿಆರ್ ಹಾಗೂ ಯೋಜನಾ ನಿರ್ವಹಣಾ ಮೇಲ್ವಿಚಾರಣೆಗಾಗಿ ವಾಸ್ತುಶಿಲ್ಪ ಮತ್ತು ಇಂಜಿನಿಯರಿಂಗ್ ಸಲಹೆಗಾರರನ್ನು ತೊಡಗಿಸಿಕೊಳ್ಳಲು ಈಗಾಗಲೇ ಟೆಂಡರ್ ಕರೆಯಲಾಗಿದೆ ಎಂದು ಮೂಲಗಳು ತಿಳಿಸಿದವು.
ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜೈವಿಕ ತಂತ್ರಜ್ಞಾನ ಇಲಾಖೆ ಜಂಟಿಯಾಗಿ ಬೆಂಗಳೂರಿನಲ್ಲಿ ಕೇಂದ್ರ ಸ್ಥಾಪಿಸಿ 450ಕ್ಕೂ ಹೆಚ್ಚು ನವೋದ್ಯಮಗಳಿಗೆ ಮೂಲಸೌಕರ್ಯ ಹಾಗೂ ಮಾರ್ಗದರ್ಶನ ಒದಗಿಸಿದೆ. ನೂರಕ್ಕೂ ಹೆಚ್ಚು ನವೋದ್ಯಮಗಳು ಈ ಕೇಂದ್ರದಲ್ಲಿ ಯಶ್ವಸಿಯಾಗಿ ಪದವಿ ಪೂರ್ಣಗೊಳಿಸಿದ್ದಾರೆ. ಅಲ್ಲದೆ, ಅಂದಾಜು ಐದು ನೂರು ಕೋಟಿ ರೂ. ನಿಧಿ ಸಂಗ್ರಹಣೆ ಅನುಕೂಲ ಮಾಡಿ, 500ಕ್ಕೂ ಹೆಚ್ಚು ಉದ್ಯೋಗ ಸೃಷ್ಠಿಸಿದೆ. 71 ಪೇಟೆಂಟ್ ಅರ್ಜಿಗಳಿಗೆ ಬೆಂಬಲಿಸಿದ್ದು ಹಾಗೂ 45 ಉತ್ಪನ್ನಗಳನ್ನು ಪ್ರಾರಂಭಿಸಲು ಸಹಾಯ ಮಾಡಿದೆ. ಅದರಂತೆ ರಾಜ್ಯದ ಎರಡನೇ ಕೇಂದ್ರವಾಗಿ ಬೆಂಗಳೂರಿನ ಮಾದರಿಯಲ್ಲಿ ಬಳ್ಳಾರಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಜೈವಿಕ ನಾವೀನ್ಯತೆ ಕೇಂದ್ರವು ಯಶಸ್ಸು ಪುನರಾವರ್ತಿಸುವ ನಿರೀಕ್ಷೆಯಿದ್ದು ಇಲ್ಲಿಯೂ ಉದ್ಯೋಗಳು ಸೃಷ್ಠಿಯಾಗುವ ಭರವಸೆಯಿದೆ.
ಕಲ್ಯಾಣ ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಳ್ಳಾರಿಯಲ್ಲಿಯೇ ಬೃಹತ್ ಜಿಂದಾಲ್ ಸೇರಿದಂತೆ ಹೆಚ್ಚಿನ ಕೈಗಾರಿಕೆ ಕಂಪನಿಗಳಿವೆ. ಬೆಂಗಳೂರು ಹೊರತುಪಡಿಸಿ ಜಿಂದಾಲ್‌ನಲ್ಲಿಯೇ ಹೆಚ್ಚಿನ ಕಾರ್ಮಿಕರು ಕೈಗಾರಿಕೆಯಲ್ಲಿಯೇ ತೊಡಗಿಕೊಂಡಿದ್ದಾರೆ. ಸಂಡೂರು ಅಪಾರ ಪ್ರಮಾಣದಲ್ಲಿ ಅರಣ್ಯ ಪ್ರದೇಶ ಹೊಂದಿರುವುದರಿಂದ ವೈವಿಧ್ಯಮ ಮರಗಳಿವೆ. ಇದರಿಂದ, ಹೊಸ ಔಷಧ, ರೋಗನಿರ್ಣಯ, ಜೈವಿಕ ಇಂಧನ ಮತ್ತು ಸುಧಾರಿತ ಕೃಷಿ ತಂತ್ರಜ್ಞಾನಗಳಂತಹ ವಿಷಯಗಳ ಮೇಲೆ ಗಮನ ಹರಿಸಲು ಸಹಾಯವಾಗಲಿದೆ.
ಈಚೆಗೆ ಕಲ್ಯಾಣ ಕರ್ನಾಟಕದ ವಿವಿಗಳಲ್ಲಿ ಹೊಸ ಕೊರ್ಸ್‌ಗಳು ಅಳವಡಿಸಿಕೊಳ್ಳುತ್ತಿದ್ದು ಹೊಸ ಸ್ಟಾರ್ಟ್‌ಆಪ್‌ಗಳಿಗೆ ಬೆಂಬಲ ಹಾಗೂ ಜೈವಿಕ ತಂತ್ರಜ್ಞಾನ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳಿಗೆ ಅನುಕೂಲವಾಗಲಿದೆ. ಈ ಕೇಂದ್ರವು ಭವಿಷ್ಯದ ವಿಜ್ಞಾನಿ ಮತ್ತು ಉದ್ಯಮಿಗಳನ್ನು ಸಿದ್ಧಪಡಿಸಲು ತರಬೇತಿ ಮತ್ತು ಕಾರ್ಯಾಗಾರ ಆಯೋಜಿಸಬಹುದು. ಜೈವಿಕ ತಂತ್ರಜ್ಞಾನದಲ್ಲಿ ನೂತನ ಪ್ರವೃತ್ತಿ, ಉದ್ಯಮದ ಅವಶ್ಯಕತೆ ಮತ್ತು ನಾವೀನ್ಯತೆ ಬಗ್ಗೆ ಜ್ಞಾನ ಹಂಚಿಕೊಳ್ಳಬಹುದು. ಒಟ್ಟಾರೆ ಜಿಲ್ಲೆಯ ಜೈವಿಕ ನಾವೀನ್ಯತೆ ಕೇಂದ್ರವೂ ವೈಜ್ಞಾನಿಕ ಪ್ರಗತಿ ವೇಗ ಮತ್ತು ಸಮಾಜದ ವಿವಿಧ ಸಮಸ್ಯೆಗಳಿಗೆ ಜೈವಿಕ ಪರಿಹಾರ ಒದಗಿಸಲು ಪ್ರಮುಖ ಪಾತ್ರ ವಹಿಸಲಿದೆ.
ಕೋಟ್.... ಜಿಲ್ಲೆಯಲ್ಲಿ ರಾಜ್ಯದ ಎರಡನೇ ಜೈವಿಕ ನಾವೀನ್ಯತೆ ಕೇಂದ್ರ ಸ್ಥಾಪಿಸುವ ಪ್ರಸ್ತಾವನೆಯಿದೆ. ಆದರೆ, ಇನ್ನೂ ಅಂತಿಮವಾಗಿಲ್ಲ. ಐಟಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯಡಿಯಲ್ಲಿ ಪ್ರಾರಂಭವಾಗಲಿದೆ. ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಚರ್ಚಿಸಿ ಟೆಂಡರ್ ಮುಗಿದ ಬಳಿಕ ಕೆಎಂಆರ್‌ಸಿಯ ಸಿಎಸ್‌ಆರ್ ನಿಧಿಯಿಂದ ಅನುದಾನ ಬಿಡುಗಡೆಗೊಳ್ಳಲಿದೆ.
- ಕೆ.ಮಂಜುನಾಥ, ಪ್ರಧಾನ ವ್ಯವಸ್ಥಾಪಕ, ಕೆಎಂಆರ್‌ಸಿ.