ಬಳ್ಳಾರಿ : ಸಮಾಜದಲ್ಲಿ ವಿಶೇಷ ಚೇತನರು ತಮ್ಮ ಶಕ್ತಿ ಮೀರಿ ಜೀವನ ಕಟ್ಟಿಕೊಳ್ಳಲು ಸಬಲರಾಗಿದ್ದು, ಇತರರಂತೆ ಉನ್ನತ ಸ್ಥಾನಕ್ಕೇರುವ ಛಲ ಹೊಂದಿರುತ್ತಾರೆ ಎಂದು ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಹೇಳಿದರು.
ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ , ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರ, ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ, ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ಸಹಯೋಗದೊಂದಿಗೆ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ವಿಶೇಷಚೇತನರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೈಹಿಕ-ಮಾನಸಿಕವಾಗಿ ಸದೃಢ ಇರುವ ಮನುಷ್ಯರೇ ಬೇಸತ್ತು, ಕಷ್ಟಕರ ಜೀವನ ನಡೆಸುತ್ತಾರೆ. ಆದರೆ ವಿಶೇಷಚೇತನರು ಕಷ್ಟ-ನೋವು, ಅಸಹಾಯಕತೆಯ ಸಂದರ್ಭದಲ್ಲಿಯೂ ಯಾವುದೇ ಬೆಂಬಲವಿಲ್ಲದೆ ಜೀವನ ನಡೆಸಲು ಶಕ್ತರಾಗಿರುತ್ತಾರೆ ಎಂದರು.
ವಿಶೇಷಚೇತನರಲ್ಲಿ ಒಗ್ಗಟ್ಟು-ಒಮ್ಮತದ ಭಾವನೆಯಿದ್ದು, ಸರ್ಕಾರ ರೂಪಿಸಿರುವ ಯೋಜನೆ ಅಥವಾ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಂಡು, ಆರ್ಥಿಕವಾಗಿ ಸಬಲರಾಗಬೇಕು ಎಂದು ತಿಳಿಸಿದರು.
ಎಡಿಸಿ ಮಹಮ್ಮದ್ ಎನ್. ಝುಬೇರ್ ಮಾತನಾಡಿ, ಸಮಾಜದಲ್ಲಿ ಅಂಗವೈಕಲ್ಯತೆಯಿಂದ ಕೂಡಿದ ಜನರನ್ನು ಕಾಣುವ ದೃಷ್ಠಿ ಬದಲಾಯಿಸುವ ಕಾರ್ಯವಾಗಬೇಕು. ಕರುಣೆ ತೋರದೇ ಅವರನ್ನು ಸಮಾನತೆಯಿಂದ ಕಾಣಬೇಕು ಎಂದು ಹೇಳಿದರು.
ಅಂಗವಿಕಲರೂ ಸಹ ಸಾಧನೆ ಮಾಡಲು ಅರ್ಹರಾಗಿದ್ದು, ವಿಜ್ಞಾನಿ ಸ್ಟೀಫೆನ್ ಹಾಕಿಂಗ್ ಅವರು ತಮ್ಮ ಅಂಗ ವೈಕಲ್ಯತೆಯನ್ನು ಮೆಟ್ಟಿ ನಿಂತು ಸಾಧನೆ ಶಿಖರ ಏರಿದ್ದರು. ಅದರಂತೆ ಎಲ್ಲಾ ವಿಶೇಷಚೇತನರು ಕಲೆ, ನೃತ್ಯ, ಆಟ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿ ಸಾಧನೆ ಮಾಡಿ, ಹಸನ್ಮುಖ-ಲವಲವಿಕೆಯಿಂದ ಜೀವನ ನಡೆಸಬೇಕು ಎಂದು ಹುರಿದುಂಬಿಸಿದರು.
ಹಿರಿಯ ಸಿವಿಲ್ ನ್ಯಾಯಧೀಶ ರಾಜೇಶ್.ಎನ್ ಹೊಸಮನೆ ಮಾತನಾಡಿದರು.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿಶೇಷಚೇತನರಿಗೆ ಸನ್ಮಾನಿಸಿ ಗೌರವಿಸಲಾಯಿತು ಹಾಗೂ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪುಟ್ಟರಾಜ ಗವಾಯಿ ಅವರ ತಂಡವು ಸುಗಮ ಸಂಗೀತ ನೀಡಿದರು. ವಿಶೇಷಚೇತನರ, ಮಕ್ಕಳ ನೃತ್ಯಗಳು ಕಾರ್ಯಕ್ರಮದ ವಿಶೇಷವಾಗಿತ್ತು.