ಬಳ್ಳಾರಿ ; ರಾಜಕೀಯ, ಧಾರ್ಮಿಕ ಹಾಗೂ ಸಮಾಜ ಸುಧಾರಣೆಯಲ್ಲಿ ಸಮಾನತೆ ಮತ್ತು ಏಕತೆ ಸ್ವರೂಪವಾಗಿರುವ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ ಎಂದು ಹಂಪಿ ಕನ್ನಡ ವಿವಿ ವಿಶ್ರಾಂತ ಕುಲಪತಿ ಪ್ರೊ. ಮಲ್ಲಿಕಾ ಘಂಟಿ ಹೇಳಿದರು.
ನಗರದ ವಿಎಸ್‌ಕೆ ವಿವಿಯಲ್ಲಿ ಬುಧವಾರ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವ ಮತ್ತು ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಗುರುದಕ್ಷಿಣೆ ಕೇಳುವ ಪರಂಪರೆಗೆ ತದ್ವಿರುದ್ಧವಾದವನೇ ನಿಜವಾದ ಶಿಕ್ಷಕ. ಜಾತಿ, ಧರ್ಮ ಎಂಬ ಎಲ್ಲೆ ಇರದ ಆದರ್ಶಪ್ರಾಯ ಶಿಕ್ಷಕನು ವಿದ್ಯಾರ್ಥಿಗಳಲ್ಲಿ ಜ್ಞಾನಾರ್ಜನೆ ಮಾಡಲು ಸಾಧ್ಯ ಎಂದರು.
ಸಮಾಜಮುಖಿ ಹಾಗೂ ಅಧ್ಯಯನಶೀಲ ಶಿಕ್ಷಕರಿಂದ ವಿದ್ಯಾರ್ಥಿಗಳ, ಸಮುದಾಯದ ಮನ ಮುಟ್ಟುವಂತೆ ವಿಷಯಗಳ ಜ್ಞಾನ ಬಿತ್ತಲು ಸಾಧ್ಯವಾಗುತ್ತದೆ. ಅದೇರೀತಿಯಾಗಿ ಕಲ್ಯಾಣ-ಕರ್ನಾಟಕ ಭಾಗದ ವಿಮೋಚನೆಗೆ ಶ್ರಮಿಸಿದ ಅನೇಕ ಪುರುಷ-ಮಹಿಳಾ ಹೋರಾಟಗಾರರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ವಿಎಸ್‌ಕೆ ವಿವಿ ಕುಲಪತಿ ಪ್ರೊ.ಎಂ.ಮುನಿರಾಜು ಮಾತನಾಡಿ, ವಿದ್ಯಾರ್ಥಿಗಳ ಜೀವನ ರೂಪಿಸುವುದು ಶಿಕ್ಷಕರ ಪ್ರಥಮ ಆದ್ಯತೆಯಾಗಬೇಕು. ಈ ನಿಟ್ಟಿನಲ್ಲಿ ಎಲ್ಲ ಶಿಕ್ಷಕರು ಮೌಲ್ಯಗಳನ್ನು ಬೆಳೆಸಿಕೊಂಡು ಆದರ್ಶಪ್ರಾಯ ಜೀವನ ನಡೆಸಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ವಿವಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ಶಿಕ್ಷಕರಿಗೆ ಬಹುಮಾನ ವಿತರಿಸಲಾಯಿತು.