ಬಳ್ಳಾರಿ: ಸ್ಪರ್ಧಾತ್ಮಕ ಯುಗದಲ್ಲಿ ಸದೃಢ ರಾಷ್ಟ ನಿರ್ಮಾಣಕ್ಕೆ ವಿದ್ಯಾರ್ಥಿಗಳ ಪಾತ್ರ ಬಹುಮುಖ್ಯ ಎಂದು ಡಿಸಿ ಪ್ರಶಾಂತ ಕುಮಾರ ಮಿಶ್ರಾ ಹೇಳಿದರು.
ಇಲ್ಲಿನ ವಿಎಸ್‌ಕೆ ವಿವಿಯ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ರಾಷ್ಟ್ರೀಯ ಸೇವಾ ಯೋಜನೆ ಘಟಕ, ಉನ್ನತಿ ಫೌಂಡೇಶನ್, ಉದ್ಯೋಗ- ಕೌಶಲ್ಯ ಅಭಿವೃದ್ದಿ ಘಟಕ ಸಿಡಾಕ್ ಸಹಯೋಗದೊಂದಿಗೆ ಬುಧವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಶ್ರೇಯಸ್ಸಿಗಾಗಿ ಮುಂಜಾನೆಯ ಹಾಗೂ ಮುಸ್ಸಂಜೆಯ ಮಾತು ಮತ್ತು ಮಂಥನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಮ್ಮ ಭವಿಷ್ಯ ರೂಪಿಸಿಕೊಳ್ಳುವ ಶಕ್ತಿ ವಿದ್ಯಾರ್ಥಿಗಳ ಕೈಯಲ್ಲಿದೆ. ಸತತ ಪ್ರಯತ್ನ ಮತ್ತು ಗುಣಮಟ್ಟದ ವಿದ್ಯಾಭ್ಯಾಸದಿಂದ ವಿದ್ಯಾರ್ಥಿಗಳು ಯಶಸ್ಸು ಕಾಣಬಹುದು. ಉನ್ನತ ಸ್ಥಾನಮಾನದ ಉದ್ಯೋಗದ ಕನಸು ಹೊಂದಿರುವವರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಮುಖ್ಯವಾಗಿದೆ ಎಂದು ತಿಳಿಸಿದರು.
ಐಎಎಸ್, ಐಪಿಎಸ್ ಗಳಂತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಿಲಿಮ್ಸ್, ಮೇನ್ಸ್ ಮತ್ತು ಸಂದರ್ಶನ ಎಂದು ಮೂರು ಹಂತ ಇರುತ್ತವೆ. ವಿದ್ಯಾರ್ಥಿಗಳು ಸ್ವಯಂ ಪ್ರೇರಣೆ, ಸಾಫ್ಟ್ ಸ್ಕಿಲ್ ಕೌಶಲ್ಯ ಅಳವಡಿಸಿಕೊಂಡು ಯಶಸ್ಸು ಕಾಣಬಹುದು ಎಂದು ಹೇಳಿದರು.
ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಮುನಿರಾಜು ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಮತ್ತು ಸಮಯ ನಿರ್ವಹಣೆ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗೆ ಪಠ್ಯಕ್ರಮ ಅಧ್ಯಯನದ ಜತೆಗೆ ದಿನ-ಪತ್ರಿಕೆ ಓದುವ ಹವ್ಯಾಸ ವೃದ್ಧಿಸಿಕೊಳ್ಳಬೇಕು. ಪದವಿ ಹಂತದಲ್ಲಿ ಅನೇಕ ಹೊಸ ಕೋರ್ಸ್‌ಗಳನ್ನು ಆರಂಭಿಸಲು ವಿಶ್ವವಿದ್ಯಾಲಯವು ಮುನ್ನುಡಿ ಬರೆದಿದೆ. ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಿ ಅಭಿವೃದ್ದಿಪಡಿಸುವುದು ಗುರಿಯಾಗಿದೆ ಎಂದರು.