ಬಳ್ಳಾರಿ : ಕರ್ತವ್ಯ ಪಾಲನೆಗಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿ ಇಟ್ಟು, ಕರ್ತವ್ಯದಲ್ಲಿ ವೀರ ಮರಣ ಹೊಂದಿದ ಪೊಲೀಸರನ್ನು ಸ್ಮರಿಸುವುದು ಆದ್ಯ ಕರ್ತವ್ಯ ಎಂದು ಐಜಿಪಿ ಬಿ.ಎಸ್.ಲೋಕೇಶ ಕುಮಾರ ಸಂತಾಪ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಪೊಲೀಸ್ ಕವಾಯತ ಮೈದಾನದಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಸೋಮವಾರ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದ ರಕ್ಷಣೆ ಹಾಗೂ ಸಾರ್ವಜನಿಕರ ಹಿತಾಸಕ್ತಿಗಾಗಿ ಅತ್ಯುತ್ತಮ ಸೇವೆ ಸಲ್ಲಿಸಿ ಸುಸ್ಥಿರ ಸಮಾಜ ನಿರ್ಮಿಸುವಲ್ಲಿ ಪೊಲೀಸ್ ಹುತಾತ್ಮರ ಕೊಡುಗೆ ಅಪಾರ. ಮುಂದಿನ ದಿನಮಾನಗಳಲ್ಲಿ ಹುತಾತ್ಮರ ಸಂಖ್ಯೆ ಗಣನೀಯವಾಗಿ ಕಡಿಮೆಗೊಂಡು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯವರೂ ತಮ್ಮ ಕುಟುಂಬದವರೊಡನೆ ಶಾಂತಿ-ನೆಮ್ಮದಿ ಜೀವನ ನಡೆಸುವಂತಾಗಬೇಕು ಎಂದರು.
ಡಿಸಿ ಪ್ರಶಾಂತ ಕುಮಾರ ಮಿಶ್ರಾ ಮಾತನಾಡಿ, ದೇಶದ ಏಳಿಗೆಗಾಗಿ ಶ್ರಮಿಸಿ ಆತ್ಮ ಸಮರ್ಪಣೆ ಮಾಡಿದ ಪೊಲೀಸ್ ಹುತಾತ್ಮರ ಸೇವೆ ಅವಿಸ್ಮರಣೀಯವಾಗಿದೆ. ಪೊಲೀಸರ ಕರ್ತವ್ಯ ನಿಷ್ಠೆಯಿಂದ ಸಮಾಜದಲ್ಲಿ ಶಾಂತಿ, ಸಮಾಧಾನ ನೆಲೆಸಿದ್ದು ಅವರ ತ್ಯಾಗ, ಬಲಿದಾನದಿಂದ ಜೀವತೆತ್ತ ಮಹಾನೀಯರು ಅಜರಾಮರ ಎಂದು ಹೇಳಿದರು.
ಎಸ್ಪಿ ಡಾ. ವಿ. ಜೆ. ಶೋಭಾರಾಣಿ ಮಾತನಾಡಿ, ಸಿಆರ್‌ಪಿಎಫ್ ಜವಾನರ ಧೈರ್ಯ, ಸಾಹಸ ಹಾಗೂ ಆತ್ಮ ಸಮರ್ಪಣೆಯನ್ನು ಭಾರತ ದೇಶದ ಎಲ್ಲ ಪ್ರಜೆಗಳು ಇಂದಿಗೂ ಸ್ಮರಿಸುತ್ತಾರೆ. ಅವರ ಸವಿನೆನಪಿಗಾಗಿ ಒಂದು ಸ್ಮಾರಕ ಸಹ ನಿರ್ಮಿಸಲಾಗಿದೆ. ಪ್ರಸ್ತಕ ಸಾಲಿನಲ್ಲಿ ದೇಶಾದ್ಯಂತ ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಸೇರಿ ಒಟ್ಟು 219 ಹಾಗೂ ರಾಜ್ಯದ 08 ಸಿಬ್ಬಂದಿ ಹುತಾತ್ಮರಾಗಿದ್ದು, ಈ ದಿನ ಅವರ ಪ್ರಾಣ ತ್ಯಾಗವನ್ನು ಸ್ಮರಿಸಬೇಕಿದೆ ಎಂದರು. ಪ್ರಮುಖರಾದ ಲೋಕಾಯುಕ್ತ ಎಸ್ಪಿ ಪಿ.ಸಿದ್ಧರಾಜು , ಎಎಸ್ಪಿಗಳಾದ ಕೆ.ಪಿ ರವಿಕುಮಾರ, ಎನ್. ನವೀನ್ ಕುಮಾರ ಇದ್ದರು.