ಜಿಲ್ಲೆ

ವೈದ್ಯನಿಗೆ ಹಣ ನೀಡಿ ಬಿಟ್ಟ ಅಪಹರಣಾಕಾರರು

ಬಳ್ಳಾರಿ : ಇಲ್ಲಿನ ಜಿಲ್ಲಾಸ್ಪತ್ರೆಯ ವೈದ್ಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣ ಬೇಡಿಕೆಯಿಟ್ಟಿದ್ದ ಅಪಹರಣಕಾರರೇ ವೈದ್ಯನಿಗೆ ಮೂರು ನೂರು ರೂ. ಹಣ ಕೊಟ್ಟು ತಾಲೂಕಿನ ಸೋಮಸಮುದ್ರ ಬಳಿ ಬಿಟ್ಟು ತೆರಳಿದ ಘಟನೆ ನಡೆದಿದೆ.

ನಗರದಲ್ಲಿ ಕಳೆದ ಶನಿವಾರ ಬೆಳ್ಳಂಬೆಳಗ್ಗೆ ಕಿಡ್ನಾಪ್ ಆಗಿದ್ದ ಜಿಲ್ಲಾಸ್ಪತ್ರೆಯ ವೈದ್ಯರನ್ನು ಪೊಲೀಸರು ಸಂಜೆವೇಳೆ ಪತ್ತೆ ಮಾಡಿದ್ದಾರೆ. ಜಿಲ್ಲಾಸ್ಪತ್ರೆಯ ಮಕ್ಕಳ ತಜ್ಞ ಡಾ.ಸುನೀಲ್ ಅವರನ್ನು ಸತ್ಯನಾರಾಯಣಪೇಟೆ ಶನಿದೇವರ ದೇವಸ್ಥಾನ ಬಳಿ ಅಪಹರಿಸಲಾಗಿತ್ತು. ಸುನೀಲ್ ಮೊಬೈಲ್‌ನಿಂದಲೇ ಅವರ ಸಹೋದರ, ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ವೇಣುಗೋಪಾಲ್ ಗುಪ್ತಗೆ ಕರೆ ಮಾಡಿದ ಅಪಹರಣಾಕಾರರು ಮೂರು ಕೋಟಿ ರೂ. ನಗದು ಹಾಗೂ ಮೂರು ಕೋಟಿ ರೂ. ಮೌಲ್ಯದ ಚಿನ್ನಾಭರಣಗಳಿಗೆ ಬೇಡಿಕೆ ಇಟ್ಟಿದ್ದರು. ಬಳಿಕ ಪೊಲೀಸರು ತೀವ್ರಗತಿಯಲ್ಲಿ ತನಿಖೆ ಕೈಗೊಂಡಿದ್ದರು. ಹೀಗೆ ಕೋಟ್ಯಂತರ ರೂಪಾಯಿಗೆ ಬೇಡಿಕೆ ಇಟ್ಟ ಅಪಹರಣಕಾರರ ಗುಂಪು ಸಂಜೆ ವೇಳೆ ವೈದ್ಯನಿಗೆ ವಾಪಸ್ ಮೂರು ನೂರು ರೂ, ಕೊಟ್ಟೂ ಬಸ್ ಹತ್ತಿ ಮನೆ ಸೇರುವಂತೆ ತಿಳಿಸಿ ಪರಾರಿಯಾಗಿದ್ದಾರೆ. ಬಳಿಕ ಸುನೀಲ್ ಅವರು ಸ್ಥಳೀಯರ ಮೊಬೈಲ್ ಮೂಲಕ ಸಹೋದರ ವೇಣುಗೋಪಾಲ್ ಅವರನ್ನು ಸಂಪರ್ಕಿಸಿ, ತಾವಿರುವ ಸ್ಥಳ ಹೇಳಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಸುರಕ್ಷಿತವಾಗಿ ನಗರಕ್ಕೆ ಕರೆ ತರಲಾಗಿದೆ. ವೈದ್ಯನ ಮೊಬೈಲ್ ನಾಪತ್ತೆಯಾಗಿದೆ. ವೈದ್ಯನ ಅಪಹರಣ ಮಾಡಿದವರ ಹುಡುಕಾಟ ನಡೆಸಲಾಗುತ್ತಿದ್ದು, ತನಿಖೆ ಮುಂದುವರಿದಿದೆ ಎಂದು ಎಸ್ಪಿ ಡಾ.ವಿ.ಜೆ.ಶೋಭಾರಾಣಿ ತಿಳಿಸಿದರು.