ಬಳ್ಳಾರಿ : ಜಿಲ್ಲೆಯು ಕಾಂಗ್ರೆಸ್‌ನ ಭದ್ರಕೋಟೆಯಾಗಿ ಮುಂದುವರಿಯಲಿದೆ ಹಾಗೂ ಬಿಜೆಪಿ ಭೇದಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ (ಕೆಪಿವೈಸಿಸಿ) ಅಧ್ಯಕ್ಷ ಎಚ್.ಎಸ್.ಮಂಜುನಾಥಗೌಡ ಹೇಳಿದರು.
ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದರು, ಈ ಕ್ಷೇತ್ರದಿಂದ ಕಾಂಗ್ರೆಸ್‌ನ ಅಧಿನಾಯಕಿ ಸೋನಿಯಾ ಗಾಂಧಿ ಸ್ಪರ್ಧಿಸಿ ವಿಜೇತರಾಗಿದ್ದರು ಎಂದು ಹೇಳಿದರು.
ಬಿಜೆಪಿಗೆ ಇಲ್ಲಿ ಅವಕಾಶಗಳನ್ನು ನೀಡಿದರೂ 2023 ವಿಧಾನಸಭಾ ಹಾಗೂ 2024ರ ಲೋಕಸಭೆ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್‌ಗೆ ಭರ್ಜರಿ ಗೆಲುವು ನೀಡಿದ್ದಾರೆ. ಯುವಕರು ಪಕ್ಷ ಸಂಘಟಿಸಿ ಹಾಗೂ ಪ್ರಚಾರ ಮಾಡಿದ್ದಾರೆ. ಪಕ್ಷದ ಪರ ಹೋರಾಡಿ ಪ್ರಕರಣಗಳನ್ನು ಹಾಕಿಸಿಕೊಂಡಿದ್ದೀರಿ. ಕಾರ್ಯಕರ್ತರು ಹಗಲಿರುಳು ಶ್ರಮಿಸಿ, ಗ್ಯಾರಂಟಿ ಕಾರ್ಡ್‌ಗಳು ಮನೆ ಮನೆಗೆ ವಿತರಿಸಿದ್ದರಿಂದ 2023ರ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧ್ಯವಾಯಿತು ಎಂದು ಸ್ಮರಿಸಿದರು.
ಜಿಲ್ಲೆಯ ಶಾಸಕರಾದ ನಾರಾ ಭರತ್‌ರೆಡ್ಡಿ, ಜೆ.ಎನ್.ಗಣೇಶ್, ಎನ್.ಟಿ. ಶ್ರೀನಿವಾಸ್ ಅವರ ಮೇಲೆ ಇಡಿ ದಾಳಿ ನಡೆಸಿ ಕೇಂದ್ರ ಬಿಜೆಪಿ ದ್ವೇಷ ರಾಜಕಾರಣ ಮಾಡುತ್ತಿದೆ. ಗಣಿ ಲೂಟಿ ಮಾಡಿದ ಶಾಸಕ ಜಿ.ಜನಾರ್ದನ ರೆಡ್ಡಿ ಅವರ ಮೇಲೆ ಶಿಕ್ಷೆ ಪ್ರಕಟವಾಗಿದ್ದರೂ ಬಿಜೆಪಿ ಅವರನ್ನು ಹೊತ್ತು ಮೆರೆಸುತ್ತಿದ್ದಾರೆ ಎಂದು ಆರೋಪಿಸಿದರು.