ಜಿಲ್ಲೆ

ಅಧಿಕಾರಿಗಳ ಹೊಂದಾಣಿಕೆಯಿಂದ ದೇಶ ಹಾಳು

ಬಳ್ಳಾರಿ : ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳ ಹೊಂದಾಣಿಕೆಯಿಂದ ದೇಶ ಹಾಳಾಗುತ್ತದೆ ಎಂದು ರಾಜ್ಯ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಹೇಳಿದರು.

ಇಲ್ಲಿನ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಸಾರ್ವಜನಿಕ ಆಹವಾಲು ಹಾಗೂ ಕುಂದುಕೊರತೆ, ದೂರು ವಿಚಾರಣೆ ಮತ್ತು ಬಾಕಿ ಇರುವ ಪ್ರಕರಣಗಳ ವಿಲೇವಾರಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕ್ಯಾನ್ಸರ್ ಗಿಂತಲೂ ಭಯಂಕರ ಭ್ರಷ್ಟಾಚಾರ ಎನ್ನುವ ಖಾಯಿಲೆ. ಭ್ರಷ್ಟಾಚಾರದಿಂದ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ಹಾಗಾಗಿ ಸರ್ಕಾರಿ ನೌಕರರು ಭ್ರಷ್ಟಾಚಾರ ತೊರೆದು ಪ್ರಾಮಾಣಿಕ ಹಾದಿಯಲ್ಲಿ ನಡೆದು, ತಮ್ಮ ಕರ್ತವ್ಯದಲ್ಲಿ ಸತ್ಯ, ನಿಷ್ಠೆ ಹಾಗೂ ಮಾನವೀಯತೆ ಪ್ರದರ್ಶಿಸಿ ಅಭಿವೃದ್ಧಿಗೆ ಪೂರಕವಾಗಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರ ನೀಡುವ ಸವಲತ್ತುಗಳನ್ನು ಪಡೆಯುವ ಹಕ್ಕು ಎಲ್ಲ ನಾಗರಿಕರಿಗೆ ಇದೆ. ಎಲ್ಲರಿಗೂ ಸಮಪಾಲು, ಸಮಬಾಳು ಎಂಬ ಸಂವಿಧಾನದ ಆಶೋತ್ತರದ ಅಡಿಯಲ್ಲಿ ಲೋಕಾಯುಕ್ತ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಜನರಿಗೆ ಸರ್ಕಾರದ ಸೌಕರ್ಯಗಳು ಸಿಗದೇ ಇದ್ದಲ್ಲಿ, ಆ ಸೌಲಭ್ಯಗಳನ್ನು ಕೊಡಿಸುವ ಕೆಲಸವನ್ನು ಸಂಸ್ಥೆ ಮಾಡುತ್ತದೆ ಎಂದರು. ಸ್ವಾತಂತ್ರ್ಯ ಲಭಿಸಿ 75 ವರ್ಷ ಕಳೆದರೂ, ಭ್ರಷ್ಟಾಚಾರದಿಂದ ಸಂವಿಧಾನದ ಹಕ್ಕುಗಳನ್ನು ಹತ್ತಿಕ್ಕುವ ಕೆಲಸವಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ನಾಲ್ಕು ಅಂಗಗಳು ಬಲಿಷ್ಠವಾಗಿ ಕಾರ್ಯನಿರ್ವಹಿಸುತ್ತಿವೆ. ನಾಲ್ಕನೇ ಸ್ತಂಭವಾಗಿರುವ ಮಾಧ್ಯಮಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದಲ್ಲಿ ಸಮಾಜದ ತಪ್ಪುಗಳನ್ನು ತಿದ್ದಲು ಸಾಧ್ಯ. ತನ್ಮೂಲಕ ಪ್ರಾಮಾಣಿಕ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.

ದೇಶದ ಸೈನಿಕರು ನಿಸ್ವಾರ್ಥದ ಸೇವೆ ನೀಡುತ್ತಿದ್ದಾರೆ. ಆದರೆ ಮಾನವನು ಸ್ವಾರ್ಥದಿಂದ ಪ್ರಕೃತಿ, ಪ್ರಾಣಿ-ಪಕ್ಷಿ ಸಂಕುಲ ನಾಶ ಪಡಿಸುತ್ತಿದ್ದಾನೆ. ನಿಸರ್ಗದಲ್ಲಿ ಪಂಚಭೂತಗಳಿಲ್ಲದಿದ್ದರೆ ನಾವಿಲ್ಲ ಅವುಗಳೇ ತಮ್ಮ-ತಮ್ಮ ಕೆಲಸ ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವಾಗ ಅಧಿಕಾರಿಗಳು ಪ್ರಾಮಾಣಿಕ ಸೇವೆ ನೀಡಲು ಏನು ಸಮಸ್ಯೆ ಎಂದು ವಿಷಾದ ವ್ಯಕ್ತಪಡಿಸಿದರು. ಜನರ ಕುಂದುಕೊರತೆಗಳನ್ನು ಬಗೆಹರಿಸುವುದು, ಭ್ರಷ್ಟಾಚಾರ ನಿರ್ಮೂಲನೆ ಮಾಡುವುದು ಲೋಕಾಯುಕ್ತ ಸಂಸ್ಥೆಯ ಕಾರ್ಯೋದ್ದೇಶ. ಸರ್ಕಾರದ ಸೌಲಭ್ಯಗಳನ್ನು ನೀಡುವ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಕರ್ತವ್ಯಲೋಪ ಎಸಗಿದರೆ, ದುರ್ನಡತೆ ಪ್ರದರ್ಶಿಸಿದರೆ ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ. ದೂರುದಾರರು ಸುಳ್ಳು ಆರೋಪ ನೀಡಿದಲ್ಲಿ ಅಂತಹ ಪ್ರಕರಣಗಳಲ್ಲಿ ಅವರ ವಿರುದ್ಧ ಕಠಿಣ ಕ್ರಮವನ್ನೂ ಸಹ ಜರುಗಿಸಲಾಗುವುದು ಎಂದು ಅವರು ಎಚ್ಚರಿಸಿದರು‌. ಸಾರ್ವಜನಿಕರು ಕಾನೂನು ವಿಷಯಗಳ ಕುರಿತು ತಿಳುವಳಿಕೆ ಹೊಂದಬೇಕು. ಪ್ರತಿಯೊಬ್ಬರೂ ಸ್ವಾಭಿಮಾನದ ಬದುಕು ಬದುಕಬೇಕು ಎಂದು ಕಿವಿಮಾತು ಹೇಳಿದರು. ಬಳಿಕ ಸಾರ್ವಜನಿಕರಿಂದ ದೂರುಗಳು ಸ್ವೀಕರಿಸಿದರು.

ವಿವಿಧಡೆ ಭೇಟಿ : ಇಲ್ಲಿನ ಬಿಮ್ಸ್, ಆರ್ ಟಿಒ ಕಚೇರಿ, ಮುಂಡರಗಿಯ ಕೈಗಾರಿಕಾ ಅಭಿವೃದ್ಧಿ ಪ್ರದೇಶ ಎಸ್ ಟಿಪಿ ಪ್ಲಾಟ್ ಗಳಿಗೆ‌ ಅನಿರೀಕ್ಷಿತ ಭೇಟಿ ಅಧಿಕಾರಿಗಳಿಗೆ ಚಾಟಿ ಬೀಸಿದರು.

ಬಿಮ್ಸ್ ನ ತುರ್ತು ಚಿಕಿತ್ಸಾ ವಿಭಾಗ, ಔಷಧಿ ವಿತರಣಾ ವಿಭಾಗ, ಓಬಿಜಿ ವಾರ್ಡ್ ಸೇರಿದಂತೆ ವಿವಿಧ ವಾರ್ಡ್ ಗಳಿಗೆ ಭೇಟಿ ನೀಡಿ ಸ್ಥಿತಿ-ಗತಿ ಪರಿಶೀಲಿಸಿದರು. ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳಿಗೆ ಔಷಧಿಗಾಗಿ ಹೊರಗಡೆ ಶಿಫಾರಸ್ಸು ಮಾಡುವಂತಿಲ್ಲ, ಆಸ್ಪತ್ರೆಯಿಂದಲೇ ವಿತರಿಸುವಂತೆ ಸರ್ಕಾರದ ಸುತ್ತೋಲೆ ಇದ್ದು, ಸಾರ್ವಜನಿಕರು ಹೊರಗಡೆಯಿಂದ ಖರೀದಿಸಿ ತಂದಿರುವುದು ಕಂಡುಬಂದಿದೆ. ಈ ಕುರಿತು ಶಿಫಾರಸ್ಸು ಮಾಡಿದ ವೈದ್ಯಾಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಬೇಕು ಎಂದು ಬಿಮ್ಸ್ ನಿರ್ದೇಶಕರಿಗೆ ಸೂಚಿಸಿದರು. ಬಿಮ್ಸ್ ಸುತ್ತಲೂ 20 ಕ್ಕೂ ಹೆಚ್ಚು ಖಾಸಗಿ ಔಷಧ ಮಳಿಗೆಗಳು ಸುತ್ತುವರೆದುಕೊಂಡಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಾದೇಶಿಕ ಸಾರಿಗೆ ಕಚೇರಿಯ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ಹಾಜರಾತಿ ಪುಸ್ತಕ, ಚಲನ-ವಲನ ವಹಿ ಹಾಗೂ ನಗದು ಘೋಷಣಾ ವಹಿ ಪುಸ್ತಕಗಳನ್ನು ಪರಿಶೀಲಿಸಿದರು.

ಬೆಳಗ್ಗೆ ಕಚೇರಿಗೆ ಬರುವಾಗ ಎಷ್ಟು ನಗದು ಹಣ ಇದೆ ಎಂದು ನಮೂದಿಸಬೇಕು, ಬಳಿಕ ಸಂಜೆ ಮನೆಗೆ ತೆರಳುವಾಗ ಇದ್ದ ನಗದು ಹಣದ ಮಾಹಿತಿಯನ್ನು ತಪ್ಪದೇ ನಮೂದಿಸಬೇಕು ಎಂದು ತಿಳಿಸಿದರು.

ಬಳಿಕ ಅಧೀಕ್ಷಕರ ಮೊಬೈಲ್ ನಲ್ಲಿನ ಫೋನ್ ಪೇ ಮತ್ತು ಗೂಗಲ್ ಪೇ ನಲ್ಲಿನ ಹಣಕಾಸು ವಹಿವಾಟು ಪರಿಶೀಲಿಸಿ, ಬ್ಯಾಂಕ್ ಖಾತೆಯ ವಹಿವಾಟಿನ ದಾಖಲೆ ಪ್ರತಿ ನೀಡಬೇಕು ಎಂದರು.

ನಗರದ ಹೊರವಲಯದ ಎಸ್ ಟಿಪಿ ಪ್ಲಾಟ್ ಹಾಗೂ ಮುಂಡರಗಿ ಲೇಔಟ್ ಭೇಟಿ ನೀಡಿ ಅಧಿಕಾರಿಗಳ ಕಾರ್ಯ ವೈಖರಿಯ ಬಗ್ಗೆ ಅಸಮಾಧಾನ ಗೊಂಡರು.