ಬಳ್ಳಾರಿ: ಜಿಲ್ಲಾಧಿಕಾರಿ ಕಚೇರಿಯ 14 ನೌಕರರಿಗೆ ಸೋಂಕು ತಗುಲಿದ ಬೆನ್ನಲ್ಲೇ ನಗರದ ತಹಸಿಲ್ ಕಚೇರಿಯ 13 ಸಿಬ್ಬಂದಿಗೆ ಗುರುವಾರ ಕರೊನಾ ದೃಢಪಟ್ಟಿದೆ. ಮುಂಜಾಗ್ರತಾ ಕ್ರಮವಾಗಿ ಶುಕ್ರವಾರ ಕಚೇರಿ ಸ್ಯಾನಿಟೈಸೇಷನ್ ಮಾಡಲಾಯಿತು. ಶನಿವಾರ ಮತ್ತು ಭಾನುವಾರ ರಜೆದಿನ ಕಾರಣ ಎರಡು ದಿನ ಸ್ಯಾನಿಟೈಸೇಷನ್ ಮಾಡಿಸಿ ಸೋಮವಾರದಿಂದ ಕಚೇರಿ ಎಂದಿನಂತೆ ಕಾರ್ಯನಿರ್ವಹಿಸಲಿದೆ. ಜನರು ಕಚೇರಿಗೆ ಬರಲು ಭಯಪಡಬೇಕಿಲ್ಲ. ದೈಹಿಕ ಅಂತರ ಕಾಪಾಡಬೇಕು. ತುರ್ತು ಕೆಲಸವಿದ್ದರೆ ಮಾತ್ರ ಕಚೇರಿಗೆ ಬರಬೇಕು ಎಂದು ತಹಸೀಲ್ದಾರ್ ನಾಗರಾಜ್ ತಿಳಿಸಿದ್ದಾರೆ.
ಸಾವಿನ ಬಳಿಕ ಮಹಿಳೆಗೆ ಕರೊನಾ ದೃಢ: ಕಂಪ್ಲಿ ಕೋಟೆಯಲ್ಲಿ ಹೃದಯಾಘಾತದಿಂದ ಜು.17ರಂದು ಮೃತಪಟ್ಟಿದ್ದ 55 ವರ್ಷದ ಮಹಿಳೆಗೆ ಕರೊನಾ ಸೋಂಕು ಇರುವುದು ಗುರುವಾರ ದೃಢಪಟ್ಟಿದೆ. ಜು.15ರ ರಾತ್ರಿ ಪತಿ ಮೃತಪಟ್ಟ ಹಿನ್ನೆಲೆಯಲ್ಲಿ ಹೃದಯಾಘಾತಕ್ಕೆ ಒಳಗಾದ ಮಹಿಳೆ ಜು.17ರಂದು ಅಸುನೀಗಿದ್ದರು. ಮರು ದಿನ ಮೃತರ ಸ್ವಾೃಬ್ ಸಂಗ್ರಹಿಸಲಾಗಿತ್ತು. ಜು.23ರ ರಾತ್ರಿ ಪಾಸಿಟಿವ್ ವರದಿ ಬಂದಿದೆ. ಮೃತ ಮಹಿಳೆ ಪ್ರಾಥಮಿಕ ಸಂಪರ್ಕದಲ್ಲಿದ್ದ 11 ಜನರ ಗಂಟಲು ದ್ರವ ಪಡೆದು ಪರೀಕ್ಷೆಗೆ ಕಳಿಸಲಾಗಿದೆ. ಸೋಂಕಿತೆ ಮನೆ ಸೀಲ್‌ಡೌನ್ ಮಾಡಲಾಗಿದೆ.