ಜಿಲ್ಲೆ

ಸುರಕ್ಷಿತ ಹೆರಿಗೆಗೆ ಕಬ್ಬಿಣಾಂಶ ಮಾತ್ರೆಗಳ ಸೇವನೆ ಅಗತ್ಯ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ಕಬ್ಬಿಣಾಂಶ ಮಾತ್ರೆಗಳ ಸೇವನೆಯಿಂದ ಗರ್ಭಿಣಿಯರಲ್ಲಿ ರಕ್ತಹೀನತೆ ಕಡಿಮೆ ಮಾಡುವುದರ ಜತೆಗೆ ಹೆರಿಗೆ ಸಮಯದಲ್ಲಿ ಹೆಚ್ಚುವರಿ ರಕ್ತದ ಅವಶ್ಯಕತೆಯನ್ನು ತಪ್ಪಿಸುತ್ತದೆ ಎಂದು ಡಿಎಚ್‌ಒ ಡಾ.ವೈ.ರಮೇಶಬಾಬು ಹೇಳಿದರು.

ತಾಲೂಕಿನ ಯಲ್ಲಾಪುರ ಕ್ರಾಸ್ ಬಳಿಯ ಹಂಡಿಜೋಗಿ ಸಮುದಾಯದ ವಲಸೆ ಪ್ರದೇಶಕ್ಕೆ ಭೇಟಿ ನೀಡಿ ಗರ್ಭಿಣಿ ಮಹಿಳೆಯರೊಂದಿಗೆ ಆರೋಗ್ಯ ವಿಚಾರಿಸಿ ಮಾತನಾಡಿದರು. ಕಬ್ಬಿಣಾಂಶ ಮಾತ್ರೆ ನುಂಗಿದರೆ ಭ್ರೂಣ ದಪ್ಪವಾಗುತ್ತದೆ, ಕಪ್ಪು ಬಣ್ಣದ ಮಗು ಹುಟ್ಟುತ್ತದೆ ಎಂಬ ತಪ್ಪು ನಂಬಿಕೆ, ಗಾಳಿಸುದ್ದಿಗಳನ್ನು ನಂಬದೇ, ವೈದ್ಯರ ಸಲಹೆಯಂತೆ ಉಚಿತವಾಗಿ ನೀಡುವ ಕಬ್ಬಿಣಾಂಶ ಮಾತ್ರೆಗಳನ್ನು ಪ್ರತಿದಿನ ಒಂದರಂತೆ ಕನಿಷ್ಟ 180 ಮಾತ್ರೆ, ರಕ್ತಹೀನತೆಯ ಪ್ರಮಾಣ ತೀವ್ರವಾಗಿದ್ದಲ್ಲಿ ದಿನಕ್ಕೆ 2 ರಂತೆ 360 ಮಾತ್ರೆಗಳನ್ನು 6 ತಿಂಗಳ ಅವಧಿಗೆ ಸೇವಿಸಬೇಕು ಎಂದು ತಿಳಿಸಿದರು.

ಗರ್ಭಿಣಿ ಎಂದು ತಿಳಿದ ನಂತರ ರಕ್ತದಲ್ಲಿ ಕಬ್ಬಿಣಾಂಶ ಹೆಚ್ಚಿಸಿ ಗರ್ಭಿಣಿಯು ಲವಲವಿಕೆಯಿಂದ ಇರಲು, ಗರ್ಭದಲ್ಲಿ ಭ್ರೂಣದ ಸರಿಯಾದ ಬೆಳವಣಿಗೆಗೆ ಮತ್ತು ಸುರಕ್ಷಿತ ಹೆರಿಗೆಗೆ ಸಹಕಾರಿಯಾಗುತ್ತದೆ. ಕುಟುಂಬದ ಸದಸ್ಯರು ಆರೋಗ್ಯ ಇಲಾಖೆಯಿಂದ ನೀಡುವ ಕಬ್ಬಿಣಾಂಶ ಮಾತ್ರೆಗಳನ್ನು ತಪ್ಪದೇ ಗರ್ಭಿಣಿಗೆ ನುಂಗಿಸಬೇಕು ಎಂದು ಮನವರಿಕೆ ಮಾಡಿದರು.

ಮುಖ್ಯವಾಗಿ ಗಂಡಾಅತರ ಗರ್ಭಿಣಿಯರು ಎಂದು ಗುರ್ತಿಸಿದ ನಂತರ ಚೊಚ್ಚಲ ಗರ್ಭಿಣಿ, ಎತ್ತರ ಕಡಿಮೆ, ಅಧಿಕ ರಕ್ತದೊತ್ತಡ, ರಕ್ತದಲ್ಲಿ ಕಬ್ಬಿಣಾಂಶ ಕೊರತೆ, ಅವಳಿ-ಜವಳಿ ಗರ್ಭಿಣಿ, ವಿವಾಹವಾಗಿ ಐದಕ್ಕಿಂತ ಹೆಚ್ಚು ವರ್ಷಗಳ ನಂತರ ಗರ್ಭಿಣಿಯಾಗಿರುವುದು, ಮೊದಲ ಹೆರಿಗೆ ಸಿಸೇರಿಯನ್ ಮುಂತಾದ ಕಾರಣಗಳಿದ್ದರೆ ನಿರ್ಲಕ್ಷಿಸಬಾರದು ಎಂದರು.