ಜಿಲ್ಲೆ

ವಿದ್ಯಾಭ್ಯಾಸ ಜತೆ ಕಲೆಗೆ ಆಸಕ್ತಿ ವಹಿಸಿ

ಎಸ್.ಎರ್ರಿಸ್ವಾಮಿ

ಬಳ್ಳಾರಿ ; ಜನಪದ ಸಂಗೀತವು ಕಲಾವಿದರಿಗೆ ವೇದಿಕೆ ಕಲ್ಪಿಸುತ್ತದೆ. ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಬಿ.ರಾಜೇಶ್ವರಿ ಹೇಳಿದರು.

ನಗರದ ಕೋಟೆ ಪ್ರದೇಶದ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿಯ ವಿದ್ಯಾರ್ಥಿನಿಯರಿಗೆ ಜಾನಪದ ಸಂಗೀತ ಕಲಿಕಾ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಮ್ಮ ಜೀವನಾಡಿಯಂತಿರುವ ದೇಶಿಯ ಕಲೆ ಉಳುವಿಗೆ ಹಾಗೂ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಮೂಲ ಜನಪದ ಸಂಗೀತ ಇತ್ತೀಚೆಗೆ ನೇಪಥ್ಯಕ್ಕೆ ಸರಿಯುತ್ತಿರುವುದು ಕಳವಳಕಾರಿಯಾಗಿದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ಕಲೆಗಳಲ್ಲಿ ಭಾಗವಹಿಸಿ ನಿಮ್ಮನ್ನು ನೀವು ಗುರುತಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಮಾತನಾಡಿ, ನಶಿಸಿಹೋಗುತ್ತಿರುವ ಕಲೆಗಳನ್ನು ಮರುಕಳಿಸಲು ಈ ಕಲಿಕಾ ತರಬೇತಿಯನ್ನು ಆಯೋಜಿಸಲಾಗಿದೆ .ಈ ತರಬೇತಿಯು 6 ತಿಂಗಳು ಕಾಲ ನಡೆಯಲಿದ್ದು, ವಾರಕ್ಕೆ ಮೂರು ದಿನದಂತೆ 2 ಗಂಟೆಗಳ ಅವಧಿ ತರಬೇತಿ ನೀಡಲಾಗುತ್ತದೆ ಎಂದರು.

ಬಳಿಕ ಚಿಗುರು ಕಲಾ ತಂಡದಿಂದ ವಿದ್ಯಾರ್ಥಿನಿಯರಿಗೆ ಜನಪದ ಸಂಗೀತ ಕಲಿಕಾ ತರಬೇತಿ ನಡೆಸಿದರು.