ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ನಡೆದ ಕರ್ನಾಟಕ ಓಪನ್ ನ್ಯಾಷನಲ್ ಮಾಸ್ಟರ್ಸ್ ಗೇಮ್ಸ್‌ನ ಈಜು ಸ್ಪರ್ಧೆಯಲ್ಲಿ ಆರು ಚಿನ್ನದ ಪದಕ ಪಡೆದ ಬಳ್ಳಾರಿಯ ರಜನಿ ಲಕ್ಕ. 
ಜಿಲ್ಲೆ

ಈಜು ಸ್ಪರ್ಧೆಯಲ್ಲಿ ರಜನಿ ಲಕ್ಕಗೆ 6 ಚಿನ್ನ

ಬಳ್ಳಾರಿ: ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ನ.4 ಮತ್ತು 5ರಂದು ನಡೆದ ಕರ್ನಾಟಕ ಓಪನ್ ನ್ಯಾಷನಲ್ ಮಾಸ್ಟರ್ಸ್ ಗೇಮ್ಸ್‌ನ ಈಜು ಸ್ಪರ್ಧೆಯಲ್ಲಿ ಬಳ್ಳಾರಿ ಜಿಲ್ಲೆಯ ರಜನಿ ಲಕ್ಕ ಅವರು ಆರು ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.

ಮಾಸ್ಟರ್ಸ್ ಗೇಮ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ಹಾಗೂ ಪ್ಯಾನ್ ಇಂಡಿಯಾ ಮಾಸ್ಟರ್ಸ್ ಗೇಮ್ಸ್ ಫೆಡರೇಷನ್‌ನಡಿ ಆಯೋಜಿಸಿದ್ದ ಸ್ಪರ್ಧೆಗಳಲ್ಲಿ ದೇಶದ ವಿವಿಧ ಭಾಗಗಳಿಂದ ಸ್ಫರ್ಧಿಗಳು ಭಾಗವಹಿಸಿದ್ದರು. ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ರಜನಿ ಲಕ್ಕ ಅವರು ಆಯ್ಕೆಯಾಗಿದ್ದರು.

ಈಜು ಸ್ಪರ್ಧೆಯಲ್ಲಿ 50 ಮೀ. ಬ್ರೆಸ್ಟ್ ಸ್ಟ್ರೋಕ್, 50 ಮೀ. ಬ್ಯಾಕ್ ಸ್ಟ್ರೋಕ್, 50 ಮೀ. ಫ್ರೀ ಸ್ಟೈಲ್, 100 ಮೀ. ಫ್ರೀ ಸ್ಟೈಲ್, 100 ಮೀ. ಬಟರ್ ಫ್ಲೈ ಹಾಗೂ ರಿಲೇ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದು 6 ಚಿನ್ನದ ಪದಕ ಗಳಿಸಿದ್ದಾರೆ.

ರಜನಿ ಲಕ್ಕ ಅವರು, ಮೂಲತಃ ಬಳ್ಳಾರಿಯವರಾಗಿದ್ದು, ಅಂಗವಿಕಲರಿಗೆ ಈಜು ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಸಾಧನೆಗೆ ಎರ‌್ರಿಸ್ವಾಮಿ ಅವರು ಮಾರ್ಗದರ್ಶಕರಾಗಿದ್ದಾರೆ. ಈವರೆಗೆ ರಾಜ್ಯಮಟ್ಟದ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ 100 ಕ್ಕೂ ಹೆಚ್ಚು ಪದಕಗಳನ್ನು ಪಡೆದುಕೊಂಡಿದ್ದಾರೆ.

ರಜನಿ ಅವರ ಸಾಧನೆಗೆ ಯುವ ಸಬಲೀಕರಣ, ಕ್ರೀಡಾ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಬಿ.ನಾಗೇಂದ್ರ, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ, ಎಸ್ಪಿ ರಂಜಿತ್ ಕುಮಾರ್ ಬಂಡಾರು, ಎಸಿ ಹೇಮಂತ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.