ಜಿಲ್ಲೆ

ಬಳ್ಳಾರಿ : ಸ್ವಯಂವರ ಪಾರ್ವತಿಯಾಗ 22ರಂದು

Bellari - Heera Nayak

ಬಳ್ಳಾರಿ : ಜೀವನ ಸಂಗಾತಿಯ ಹುಡುಕಾಡುತ್ತಿರುವಿರೇ..?. ಮದುವೆ ಸಂಬಂಧಿಸಿದ ತೊಂದರೆಗಳು ಪರಿಹಾರವಾಗಬೇಕೇ ? ಹಾಗಾದರೆ ಬನ್ನಿ.. ವಿಜಯವಾಣಿ-ದಿಗ್ವಿಜಯ 24*7 ಸುದ್ದಿವಾಹಿನಿ ಹಾಗೂ ಕನ್ನಡ ಮ್ಯಾಟ್ರಿಮೊನಿ ಸಹಯೋಗದಲ್ಲಿ ನಡೆಯಲಿರುವ ಸ್ವಯಂವರ ಪಾರ್ವತಿಯಾಗದಲ್ಲಿ ಎಲ್ಲರೂ ಪಾಲ್ಗೊಳ್ಳಿ.

ಬಳ್ಳಾರಿಯ ಬಸವೇಶ್ವರ ನಗರದ ಸಂಗಮೇಶ್ವರ ದೇವಸ್ಥಾನದಲ್ಲಿ ಜು.22ರಂದು ಬೆಳಗ್ಗೆ 9 ಗಂಟೆಯಿಂದ ಸ್ವಯಂವರ ಪಾರ್ವತಿಯಾಗ ನಡೆಯಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ದೋಷಪರಿಹಾರಕ್ಕೆ ಉತ್ತಮ ಅವಕಾಶ ಕಲ್ಪಿಸಲಾಗಿದೆ.

ಸ್ವಯಂವರ ಪಾರ್ವತಿಯಾಗದಲ್ಲಿ ಪಾಲ್ಗೊಳ್ಳುವವರಿಗೆ ಕಂಕಣಭಾಗ್ಯ ಕೂಡಿಬರುವ ನಂಬಿಕೆ ಇದೆ. ಪುರಾಣಗಳ ಪ್ರಕಾರ ಸ್ವಯಂವರ ಮಂತ್ರ ಉಪದೇಶದ ನಂತರ ಶಿವ-ಪಾರ್ವತಿ ಯಾಗ ಮಹತ್ವ ಪಡೆದುಕೊಂಡಿದೆ.

ಪೂರ್ವಜನ್ಮದ ದೋಷಗಳಿಂದಲೂ ಕೆಲವರಿಗೆ ಮದುವೆ ವಿಳಂಬವಾಗುತ್ತಿರುತ್ತದೆ. ಸಂಸಾರದಲ್ಲಿ ನೆಮ್ಮದಿ ಇಲ್ಲದವರೂ ಯಾಗದಲ್ಲಿ ಪಾಲ್ಗೊಳ್ಳುವ ಮೂಲಕ ನೆಮ್ಮದಿ ಹೊಂದಬಹುದಾಗಿದೆ.

  • ಬರುವಾಗ ಜಾತಕ ತನ್ನಿ
    ಸ್ವಯಂವರ ಪಾರ್ವತಿಯಾಗದಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಬರುವಾರ ಜಾತಕವನ್ನು ತರಬೇಕು. ಯಾಗದಲ್ಲಿ ಪಾಲ್ಗೊಳ್ಳುವ ಭಾವಿ ವಧು-ವರರು ತಮ್ಮ ಭಾವಚಿತ್ರದೊಂದಿಗೆ ಜಾತಕವನ್ನು ತರಬೇಕು. ಹೆಚ್ಚಿನ ವಿವರಗಳಿಗೆ ಮೊ:7538806555 ಗೆ ಸಂಪರ್ಕಿಸಬಹುದು.
  • ಯಾಗ ನಡೆಯುವ ಸ್ಥಳ :
    ಬಳ್ಳಾರಿಯ ಬಸವೇಶ್ವರ ನಗರದ ಶ್ರೀಸಂಗಮೇಶ್ವರ ದೇವಸ್ಥಾನದಲ್ಲಿ ಸ್ವಯಂವರ ಪಾರ್ವತಿಯಾಗ ನಡೆಯಲಿದೆ. ಪ್ರಧಾನ ಅರ್ಚಕ ಬಿ.ಲಕ್ಷ್ಮಿನಾರಾಯಣ ಅವರ ನೇತೃತ್ವದಲ್ಲಿ ಯಾಗ ನಡೆಯಲಿದೆ. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಬಸವರಾಜ್, ಉಪಾಧ್ಯಕ್ಷ ಎಂ.ವಾಮದೇವ, ಕಾರ್ಯದರ್ಶಿ ವೈ.ಡಿ.ಯರಣ್ಣ, ದೇವಸ್ಥಾನದ ಅರ್ಚಕ ವಿನೋದ್ ಮತ್ತಿತರರು ಭಾಗವಹಿಸಲಿದ್ದಾರೆ.
  • ಪೌರಾಣಿಕ ಹಿನ್ನೆಲೆ
    ಪಾರ್ವತಿದೇವಿಯೂ ಪರಮೇಶ್ವರನೊಂದಿಗೆ ಜಗಳಮಾಡಿಕೊಂಡು ಭೂಲೋಕಕ್ಕೆ ಬರುತ್ತಾಳೆ. ಆಗ ಪಾರ್ವತಿಯನ್ನು ಮರೆತ ಶಿವನು ಏಕಾಂತಕ್ಕೆ ಹೊರಟುಹೋಗುತ್ತಾನೆ. ಇದರಿಂದ ಲಯಕಾರ್ಯಗಳೆಲ್ಲ ಅಸ್ತವ್ಯಸ್ತವಾಗುತ್ತವೆ. ಈ ಪರಿಸ್ಥಿತಿ ಅರಿತ ಋಷಿಮುನಿಗಳು ಹಾಗೂ ದೇವತೆಗಳು ಪ್ರಾರ್ಥನೆ ಮೂಲಕ ಶಿವನನ್ನು ಎಚ್ಚರಿಸಲು ಯತ್ನಿಸುತ್ತಾರೆ. ಇತ್ತ ಭೂಲೋಕದಲ್ಲಿದ್ದ ಪಾರ್ವತಿಯು ಶಿವಲಿಂಗ ಪ್ರತಿಷ್ಠಾಪಿಸಿ ತಪಸ್ಸು ಮಾಡುತ್ತಿರುತ್ತಾಳೆ. ಈ ವೇಳೆ ನಾರದರು ಆಗಮಿಸಿ ಸ್ವಯಂವರ ಮಂತ್ರ ಉಪದೇಶಿಸುತ್ತಾರೆ. ಪಾರ್ವತಿ ಈ ಮಂತ್ರವನ್ನು ಜಪಿಸಿದಾಗ ಶಿವನು ಎಚ್ಚರಗೊಂಡು ಭೂಲೋಕಕ್ಕೆ ಆಗಮಿಸುತ್ತಾರೆ. ನಂತರ ಪಾರ್ವತಿಯನ್ನು ವಿವಾಹವಾಗಿ ಕೈಲಾಸಕ್ಕೆ ಕರೆದೊಯ್ಯುತ್ತಾರೆ. ಕೆಲವರಿಗೆ ಪೂರ್ವಜನ್ಮದ ಯಾವುದೋ ದೋಷಗಳು ವಿವಾಹ ಕಾರ್ಯಕ್ಕೆ ಅಡ್ಡಿ ಉಂಟು ಮಾಡುತ್ತಿರುತ್ತವೆ. ಅಂಥವರು ಸ್ವಯಂವರ ಪಾರ್ವತಿಯಾಗ ಮಾಡಿಸಿ ಪ್ರಸಾದ ಸ್ವೀಕರಿಸಿದರೆ ವಿವಾಹವಾಗುತ್ತದೆ ಎಂಬ ನಂಬಿಕೆ ಇದೆ.