ಜಿಲ್ಲೆ

ವಿದ್ಯಾರ್ಥಿಗಳು ಅಧ್ಯಯನಶೀಲರಾಗಿ

ಎಸ್.ಎರ್ರಿಸ್ವಾಮಿ

ಬಳ್ಳಾರಿ ; ಇಂದಿನ ಯುವ ಸಮೂಹ ಓದಿನಿಂದ ವಿಮುಖರಾಗಿದ್ದು ಸಾಹಿತ್ಯ, ವಿಜ್ಞಾನ, ಕೃಷಿ, ಇತಿಹಾಸ, ಪರಂಪರೆಯ ಬಗ್ಗೆ ಅರಿವನ್ನು ವಿಸ್ತರಿಸಿಕೊಳ್ಳಬೇಕು ಎಂದು ಲೇಖಕ ಸಿದ್ದರಾಮ ಕಲ್ಮಠ ಹೇಳಿದರು.

ನಗರದ ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಕನ್ನಡ ಸಾಂಸ್ಕ್ರತಿಕ ಪರಿಷತ್ತು ವತಿಯಿಂದ ಶುಕ್ರವಾರ ಆಯೋಜಿಸಿದ್ದ ಕನ್ನಡ ಅಭಿಮಾನ - ಅಭಿಯಾನ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹನೀಯರೆಲ್ಲರೂ ತಾವು ಪಡೆದ ಜ್ಞಾನದಿಂದ ಸಮಾಜಕ್ಕೆ ಕೊಡುಗೆ ಕೊಟ್ಟಿದ್ದಾರೆ. ಪುಸ್ತಕವು ನಮ್ಮಲ್ಲಿರುವ ಅಜ್ಞಾನವನ್ನು ಕಳಚುತ್ತದೆ ಗ್ರಂಥಾಲಯಗಳನ್ನು ಸದುಪಯೋಗ ಪಡಿಸಿಕೊಂಡವರು ಬದುಕಿನ ದಾರಿಯಲ್ಲಿ ತಮ್ಮ ಸಾಧನೆಯ ಹೆಜ್ಜೆ ಗುರುತು ಮೂಡಿಸುತ್ತಾರೆ ಎಂದರು.

ಸಾಮಾಜಿಕ ಹೋರಾಟಗಾರ ಬಾದಾಮಿ ಶಿವಲಿಂಗ ನಾಯಕ ಮಾತನಾಡಿ, ಏಕೀಕರಣ ಚರಿತ್ರೆಯ ಹಲವು ಸಂಗತಿಗಳನ್ನು ಲೇಖಕ ಸಿದ್ದರಾಮ ಕಲ್ಮಠ ಅರ್ಥವತ್ತಾಗಿ ಕಟ್ಟಿ ಕೊಟ್ಟಿದ್ದಾರೆ.ಇಂತಹ ಕೃತಿಗಳನ್ನು ವಿದ್ಯಾರ್ಥಿ ಸಮುದಾಯ ಓದುವಂತಾಗಬೇಕು ಆ ಕಾರಣಕ್ಕಾಗಿ ವಿದ್ಯಾರ್ಥಿಗಳಿಗೆ ದಾನಿಗಳ ನೆರವಿನಿಂದ ಪೈಲ್ವಾನ್ ಪಿಂಜಾರ್ ರಂಜಾನ್ ಸಾಬ್ ಕೃತಿಯನ್ನು ತಲುಪಿಸುವ ಮೂಲಕ ಕನ್ನಡ ಚಳವಳಿಯ ಸಾಂದರ್ಭಿಕ ಮಹತ್ವವನ್ನು ತಿಳಿಸಲು ಪ್ರಯತ್ನಿಸಲಾಗುವದು ಎಂದರು.

ಬಳಿಕ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಕೊರ್ಲಗುಂದಿ ದೊಡ್ಡ ಕೇಶವರೆಡ್ಡಿ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಿದರು.