ಬಳ್ಳಾರಿ: ಸ್ಥಳೀಯ ರಂಗತೋರಣ ಹಾಗೂ ವಿಜಯವಾಣಿ-ದಿಗ್ವಿಜಯ ನ್ಯೂಸ್ ಮಾಧ್ಯಮ ಸಹಯೋಗದಲ್ಲಿ ಮಾ.13ರಿಂದ ಮೂರು ದಿನ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ರಂಗ ತೋರಣ 13ನೇ ರಾಜ್ಯ ವಿದ್ಯಾರ್ಥಿ ನಾಟಕೋತ್ಸವ ಆಯೋಜಿಸಲಾಗಿದೆ ಎಂದು ನಾಟಕೋತ್ಸವ ನಾಗರಿಕ ಸ್ವಾಗತ ಸಮಿತಿ ಅಧ್ಯಕ್ಷ ಪಲ್ಲೇದ ಪೊಂಪಾಪತಿ ಹೇಳಿದರು.
ನಾಟಕೋತ್ಸವದ ಸರ್ವಾಧ್ಯಕ್ಷರಾಗಿ ಬೀದಿ ನಾಟಕ ತಜ್ಞ ಹೊಸಪೇಟೆಯ ಪಿ.ಅಬ್ದುಲ್ ಆಯ್ಕೆಯಾಗಿದ್ದಾರೆ. ನಾಟಕೋತ್ಸವದಲ್ಲಿ ಪ್ರತಿ ಗಂಟೆಗೊಂದರಂತೆ ಹೊಸ ನಾಟಕಗಳ ಪ್ರದರ್ಶನವಿರಲಿದೆ. ಎಲ್ಲ ನಾಟಕಗಳಿಗೂ ಉಚಿತ ಪ್ರವೇಶವಿದೆ. ಕಲಾವಿದರಿಗೆ ಊಟ, ವಸತಿ ವ್ಯವಸ್ಥೆ ಉಚಿತವಾಗಿ ಕಲ್ಪಿಸಲಾಗುವುದು. ನಾಟಕೋತ್ಸವದ ವ್ಯವಸ್ಥೆಗಳಲ್ಲಿ ಸ್ವಯಂ ಸೇವಕರಾಗಿ ಪಾಲ್ಗೊಳ್ಳಲು ಆಸಕ್ತಿಯುಳ್ಳ ಯುವಜನತೆ ಮುಖ್ಯ ವ್ಯವಸ್ಥಾಪಕ ಅಡವಿಸ್ವಾಮಿ 9916009426 ಸಂಪರ್ಕಿಸಿ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಥಮ, ದ್ವಿತೀಯ ಹಾಗೂ ತೃತೀಯ ವಿಜೇತ ತಂಡಗಳಿಗೆ ಕ್ರಮವಾಗಿ 25 ಸಾವಿರ ರೂ., 20 ಸಾವಿರ ರೂ. ಮತ್ತು 15 ಸಾವಿರ ನಗದು ಜತೆಗೆ ಆಕರ್ಷಕ ಪ್ರಶಸ್ತಿ ಫಲಕ ನೀಡಲಾಗುವುದು. ಉತ್ತಮ ನಟ, ನಟಿ, ನಿರ್ದೇಶಕ, ರಂಗಸಜ್ಜಿಕೆ, ಸಂಗೀತ, ಪ್ರಸಾದನ, ಧ್ವನಿ ಬೆಳಕು, ವೇಷಭೂಷಣ ಹಾಗೂ ಉದಯೋನ್ಮುಖ ನಾಟಕಕಾರ ರಂಗ ಪುರಸ್ಕಾರಗಳಿವೆ. ಅತ್ಯಾಕರ್ಷಕವಾಗಿ ಜನಮನ ಸೆಳೆದ ಕಾಲೇಜು ತಂಡಗಳಿಗೆ ಜನಪ್ರಿಯ ರಂಗ ವೈಭವಯಾತ್ರೆ ಪ್ರಶಸ್ತಿ ನೀಡಲಾಗುವುದು. ನಾಟಕೋತ್ಸವದ ವ್ಯವಸ್ಥಿತ ನಿರ್ವಹಣೆಗಾಗಿ ಬಳ್ಳಾರಿಯ ವಿಎಸ್‌ಕೆ ವಿವಿಯ ಸ್ನಾತಕೋತ್ತರ ವಿದ್ಯಾರ್ಥಿ ಮುಖಂಡ ಕಾರ್ತೀಕ್ ಮರಿಸ್ವಾಮಿಮಠ ನೇತೃತ್ವದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಹತ್ತು ಜನರ ಸಂಚಲನ ಸಮಿತಿ ರಚಿಸಲಾಗಿದೆ ಎಂದರು. ನಾಟಕೋತ್ಸವ ಪ್ರಧಾನ ಕಾಯದರ್ಶಿ ಗಣಪಾಲ ಐನಾಥರೆಡ್ಡಿ, ರಂಗತೋರಣದ ಕಾರ್ಯದರ್ಶಿ ಕಪ್ಪಗಲ್ಲು ಪ್ರಭುದೇವ ಇದ್ದರು.