ಬಳ್ಳಾರಿ : ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಚಿಕ್ಕೋಡಿಯ ಹಿರೇಕುಡಿ ನಂದಿ ಪರ್ವತ ಆಶ್ರಮದ ಜೈನಮುನಿಯ ಹತ್ಯೆ ಮಾಡಿದ ಆರೋಪಿಗಳನ್ನು ಕಠಿಣ ಶಿಕ್ಷೆಗೊಳಪಡಿಸಬೇಕು ಎಂದು ಒತ್ತಾಯಿಸಿ ಶುಕ್ರವಾರ ಜೈನ ಸಮುದಾಯದವರು ಜಿಲ್ಲಾಡಳಿತದ ಮುಂದೆ ಪ್ರತಿಭಟನೆ ನಡೆಸಿ ನಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಪಾಶ್ವನಾಥ ಜೈನ್ ಶ್ವೇತಾಂಬರ ಸಂಘ ಜಿಲ್ಲಾಧ್ಯಕ್ಷ ಉತ್ಸವಲಾಲ್ ಬಾಗ್ರೇಚಾ ಮಾತನಾಡಿ, ಪ್ರಜಾಪ್ರಭುತ್ವ ದೇಶದಲ್ಲಿ ಅತ್ಯಂತ ನೀಚ ಕೃತ್ಯಕ್ಕೆ ಕೈಹಾಕಿದ್ದಲ್ಲದೇ ಜೈನ ಧರ್ಮದ ಒಬ್ಬ ಮುನಿಗಳನ್ನು ಅತ್ಯಂತ ಹೀನಾಯವಾಗಿ ಹತ್ಯೆಗೈದಿರುವ ಹೃದಯವಿದ್ರಾವಕ ಘಟನೆಯನ್ನು ನೆನೆಸಿಕೊಳ್ಳಲೂ ಕೂಡ ಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕೋಡಿಯ ಹಿರೇಕುಡಿ ನಂದಿ ಪರ್ವತ ಆಶ್ರಮದ ಜೈನಮುನಿ 108 ಕಾಮಕುಮಾರ ನಂದಿ ಮಹಾರಾಜರರನ್ನು ಅತ್ಯಂತ ಕ್ರೂರವಾಗಿ ಹತ್ಯೆಗೈದಿರುವುದು ಶೋಚನೀಯ ಸಂಗತಿಯಾಗಿದೆ. ಈ ಪ್ರಕರಣದಲ್ಲಿ ಯಾರೇ ಆರೋಪಿಗಳು ಭಾಗವಹಿಸಿದ್ದರೂ ಕೂಡ ಕಾನೂನು ರೀತಿಯಲ್ಲಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಆರೋಪಿಗಳಿಗೆ ಅತ್ಯಂತ ಕಠಿಣ ಶಿಕ್ಷೆ ನೀಡಬೇಕು. ರಾಜ್ಯದ ಸರ್ವಧರ್ಮಗಳ ಮಠ-ಮಾನ್ಯಗಳ ಪೂಜ್ಯರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.
ವಿಶ್ವದ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಭಾರತವು ಅತಿದೊಡ್ಡ ರಾಷ್ಟ್ರವಾಗಿದೆ. ಭಾರತವು ಕೃಷಿ ಪ್ರಧಾನವಾದಂತಹ ರಾಷ್ಟ್ರ, ಇಂತಹ ಭಾರತದೇಶದಲ್ಲ. ಹಿಂದು ಧರ್ಮ ಮಹೋನ್ನತವಾದದ್ದು. ಭಾರತದಲ್ಲಿ ಎಲ್ಲ ಧರ್ಮಗಳು ಒಂದೇ ಎಂದು ಸಾರುವ ಅನೇಕ ಸಾಧು ಸಂತರು ನೆಲೆ ಬೀಡಿದ ರಾಷ್ಟ್ರ ಇದಾಗಿದೆ. ಇಂತಹ ಮಹೋನ್ನತ ದೇಶದಲ್ಲಿ ಹುಟ್ಟಿ ಹಿಂದು ಸಂಪ್ರದಾಯವನ್ನು ಅಳವಡಿಸಿಕೊಂಡು ಸಾಧು, ಸಂತರು, ಅಹಿಂಸಾ, ಅನುಕಂಪದ ದಾರಿಯಲ್ಲಿ ನಡೆದು ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆ ಎಂದರು.
ಇಂದಿಗೂ ಹಿಂಸೆಯನ್ನು ತೊರೆದು ಅಹಿಂಸಾ ಮಾರ್ಗದಲ್ಲಿ ನಡೆಯಬೇಕೆಂಬ ಸದುದ್ದೇಶದಿಂದ ಭಾರತ ದೇಶದಲ್ಲಿ ಸಾಧು, ಸಂತರು, ಗುರುಗಳು ತಮ್ಮ ತಮ್ಮ ಉಪದೇಶಗಳನ್ನು ದೇಶದ ಉದ್ದಗಲಕ್ಕೂ ಸಾರುತ್ತಿರುವುದು ನಮ್ಮೆಲ್ಲರಿಗೂ ಕಾಣಸಿಗುತ್ತಿದೆ. ಜೈನ ಧರ್ಮದ ಸಾಧು, ಸಂತರು ದೇಶದುದ್ದಕ್ಕೂ ಧರ್ಮವನ್ನು ಸಾರಲು ಪಾದಯಾತ್ರೆ ಮೂಲಕ ಮನೆ ಮನೆಗೂ ಭೇಟಿ ನೀಡಿ, ಭಿಕ್ಷಾಟನೆ ಮಾಡಿ, ಅದರಲ್ಲ ಆದ ಜೀವನವನ್ನು ರೂಪಿಸಿಕೊಳ್ಳುತ್ತಿದ್ದಾರೆ ತಿಳಿಸಿದರು.
ಜೈನ ಧರ್ಮದ ಸಾಧು ಸಂತರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶದಲ್ಲ ಕಾಲ್ನಡಿಗೆ (ಪಾದಯಾತ್ರೆ) ಮೂಲಕ ಯಾತ್ರೆ ಮಾಡುತ್ತಿದ್ದು, ಅಂತಹ ಜೈನಮುನಿಗಳಿಗೆ ರಾಜ್ಯ ಸರ್ಕಾರ ಸೂಕ್ತ ಭದ್ರತೆ ನೀಡಬೇಕೆಂದು ಮನವಿ ಮಾಡಿದರು.
ಶ್ರೀ ವರ್ಧಮಾನ್ ಸ್ಥಾನಲ್ ಜೈನ ಸಂಘದ ಅಧ್ಯಕ್ಷ ಕೇವಲಚಂದ್ ವಿನೈಕ್ಯ, ಶ್ರೀ ಜೈನ ಶ್ವೇತಾಂಬರ ತೇರಾಪಂತ್ ಸಭಾದ ಅಧ್ಯಕ್ಷ ಕಮಲ್ ಛಾಜೆಡ್ ಇನ್ನಿತರರಿದ್ದರು.